Saturday, 14th December 2024

PM Narendra Modi: ಪಿಎಂ ಸೂರ್ಯ ಘರ್ ಆಗಲಿದೆ ಹರ್ ಘರ್: ಪ್ರಧಾನಿ ನರೇಂದ್ರ ಮೋದಿ

PM Narendra Modi

ನವದೆಹಲಿ: ಪಿಎಂ ಸೂರ್ಯ ಘರ್ (PM Surya Ghar) ಇನ್ನು ಪ್ರತಿ ಮನೆಗೂ ಉಚಿತ ವಿದ್ಯುತ್ ಕಲ್ಪಿಸುವ ಹರ್ ಘರ್ ಯೋಜನೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು. ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಕ್ಷೇತ್ರದ 4ನೇ ಜಾಗತಿಕ ಹೂಡಿಕೆದಾರರ ಸಮಾವೇಶ ಮತ್ತು ರಿ ಇನ್ವೆಸ್ಟ್‌ ಎಕ್ಸ್‌ಪೊ (RE Invest Expo) ಉದ್ದೇಶಿಸಿ ಮಾತನಾಡಿದರು.

ಸೂರ್ಯ ಘರ್ ಯೋಜನೆಯಡಿ ದೇಶದ ಪ್ರತಿಯೊಂದು ಮನೆಯೂ ವಿದ್ಯುತ್ ಉತ್ಪಾದಕ ಕೇಂದ್ರಗಳಾಗಿ ಮಾರ್ಪಡಲಿವೆ. ಸೂರ್ಯ ಘರ್‌ಗೆ ಈಗಾಗಲೇ 1 ಕೋಟಿ 30 ಲಕ್ಷಕ್ಕೂ ಅಧಿಕ ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ಈವರೆಗೆ 3.25 ಲಕ್ಷ ಮನೆಗಳಲ್ಲಿ ಸೋಲಾರ್ ಮೇಲ್ಚಾವಣಿ ಅಳವಡಿಕೆ ಪೂರ್ಣಗೊಂಡಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | PM Modi Birthday : ನನಗೆ ಕೈಯಿಂದ ಬೆಲ್ಲ ತಿನ್ನಿಸುತ್ತಿದ್ದರು; 74ನೇ ಹುಟ್ಟುಹಬ್ಬದಂದು ತಾಯಿಯ ನೆನೆದು ಭಾವುಕರಾದ ಮೋದಿ

ಸೂರ್ಯ ಘರ್ ಅಳವಡಿಸಿಕೊಂಡ ಕುಟುಂಬ 250 ಯುನಿಟ್ ವಿದ್ಯುತ್ ಬಳಸಿಯೂ ಹೆಚ್ಚುವರಿ 100 ಯುನಿಟ್ ಉತ್ಪಾದಿಸುತ್ತದೆ. ಇದನ್ನು ಗ್ರಿಡ್‌ಗಳಿಗೆ ಮಾರಾಟ ಮಾಡಿದರೆ ಆದಾಯವೂ ಸಿಗುತ್ತದೆ. ಇದೆಲ್ಲದರಿಂದ ವಾರ್ಷಿಕ 25000 ರು. ಉಳಿತಾಯವಾಗಲಿದೆ. 20 ವರ್ಷಗಳಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಮೊತ್ತದ ಉಳಿಕೆ – ಗಳಿಕೆಯಾಗಲಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.

20 ಲಕ್ಷ ಉದ್ಯೋಗ ಸೃಷ್ಟಿ

ಪಿಎಂ ಸೂರ್ಯ ಘರ್ ಯೋಜನೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸಲಿದೆ. 3 ಲಕ್ಷ ಯುವಕರನ್ನು ಮಾನವಶಕ್ತಿಯನ್ನಾಗಿ ರೂಪಿಸುವ ಗುರಿ ಸರ್ಕಾರಕ್ಕಿದೆ. ಇದರಲ್ಲಿ 1 ಲಕ್ಷ ಯುವಕರು ಸೋಲಾರ್ ಪಿವಿ ತಂತ್ರಜ್ಞರಾಗಲಿದ್ದಾರೆ ಎಂದು ತಿಳಿಸಿದರು.

ಸುವರ್ಣಾಕ್ಷರದಲ್ಲಿ ಭಾರತದ ಸೌರ ಕ್ರಾಂತಿ

ಭಾರತದ ಸೌರ ಕ್ರಾಂತಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, 21ನೇ ಶತಮಾನ ಭಾರತದ್ದಾಗಲಿದ್ದು, ಇತಿಹಾಸ ನಿರ್ಮಿಸಲಿದೆ ಎಂದು ಪ್ರತಿಪಾದಿಸಿದರು.

ದೇಶಾದ್ಯಂತ ಸೌರಗ್ರಾಮ ಅಭಿಯಾನ

ಶತಮಾನಗಳಷ್ಟು ಹಳೆಯದಾದ ಸೂರ್ಯ ದೇವಾಲಯ ಹೊಂದಿರುವ ಮೊಧೇರಾ ಭಾರತದ ಮೊದಲ ಸೌರಗ್ರಾಮವಾಗಿದ್ದು, ದೇಶಾದ್ಯಂತ ಸೌರಗ್ರಾಮ ನಿರ್ಮಾಣದ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು.

ಅಯೋಧ್ಯೆ ಸೇರಿ 17 ಸೌರ ನಗರಗಳ ನಿರ್ಮಾಣ

ಅಯೋಧ್ಯೆ ಸೇರಿದಂತೆ 17 ಪ್ರಮುಖ ನಗರಗಳನ್ನು ಮಾದರಿ ಸೌರ ನಗರಗಳನ್ನಾಗಿ ರೂಪಿಸುವ ಗುರಿಯಿದೆ. ಸೌರಶಕ್ತಿಯಿಂದ ಅಯೋಧ್ಯೆಯ ಪ್ರತಿಯೊಂದು ಮನೆ, ಪ್ರತಿ ಕಚೇರಿಗಳು ಬೆಳಗಲಿವೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಅನೇಕ ಮನೆಗಳು ಸೌರಶಕ್ತಿಯುತವಾಗಿವೆ. ಸೌರ ಬೀದಿ ದೀಪಗಳು, ಸೌರ ಛೇದಕಗಳು, ಸೌರ ದೋಣಿಗಳು, ಸೌರ ನೀರಿನ ಎಟಿಎಂಗಳು ಮತ್ತು ಸೌರ ಕಟ್ಟಡಗಳನ್ನು ಅಯೋಧ್ಯೆಯಲ್ಲೀಗ ಕಾಣಬಹುದು. ಇದೇ ಮಾದರಿಯಲ್ಲಿ ಭಾರತದಲ್ಲಿ ಸೌರ ನಗರಗಳನ್ನಾಗಿ ಅಭಿವೃದ್ಧಿಪಡಿಸಲು 17 ನಗರಗಳನ್ನು ಸರ್ಕಾರ ಗುರುತಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | PM Modi Birthday: ಪ್ರಧಾನಿ ಮೋದಿಗೆ ಪ್ರಿಯವಾದ ಖಾದ್ಯಗಳು ಯಾವುವು ಗೊತ್ತೆ?

ಹಸಿರು ಇಂಧನದಲ್ಲಿ ಭಾರತಕ್ಕೆ ಅಗ್ರಸ್ಥಾನ

ಹಸಿರು ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ ಅಗ್ರ ಸ್ಥಾನಕ್ಕೇರಲಿದೆ. G-20 ಯಲ್ಲಿ ಮೊದಲ ರಾಷ್ಟ್ರವಾಗಿದೆ ಭಾರತ. ಪ್ಯಾರಿಸ್‌ನಲ್ಲಿ ನಿಗದಿಪಡಿಸಿದ ಹವಾಮಾನ ಬದ್ಧತೆಗಳನ್ನು ಗಡುವಿನ 9 ವರ್ಷಗಳ ಮುಂಚೆಯೇ ಸಾಧಿಸಿದ ಹೆಗ್ಗಳಿಕೆ ನಮ್ಮದಾಗಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು.

7000 ಕೋಟಿ ಅಂತರ ನಿಧಿ ಯೋಜನೆ

ಹಸಿರು ಇಂಧನ ಕ್ಷೇತ್ರದಲ್ಲಿ 7000 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಕಡಲಾಚೆಯ ಪವನಶಕ್ತಿ ಯೋಜನೆಗಳಿಗೆ ಅಂತರ ನಿಧಿ ಯೋಜನೆ ಆರಂಭಿಸಿದೆ ಎಂದು ತಿಳಿಸಿದರು.

31000 ಮೆಗಾವ್ಯಾಟ್ ಜಲವಿದ್ಯುತ್ ಗುರಿ

ಮುಂಬರುವ ದಿನಗಳಲ್ಲಿ ಭಾರತ 12,000 ಕೋಟಿ ರೂ. ವೆಚ್ಚದಲ್ಲಿ 31,000 ಮೆಗಾವ್ಯಾಟ್ ಜಲವಿದ್ಯುತ್ ಅನ್ನೂ ಉತ್ಪಾದಿಸುವ ಗುರಿ ಹೊಂದಿದೆ ಎಂದು ಪ್ರಧಾನಿ ಘೋಷಿಸಿದರು.

ಸೌರಶಕ್ತಿ, ಪವನಶಕ್ತಿ, ಪರಮಾಣು ಮತ್ತು ಜಲಶಕ್ತಿಯಂತಹ ನವೀಕರಿಸಬಹುದಾದ ಇಂಧನದ ಆಧಾರದ ಮೇಲೆ ಭಾರತ ತನ್ನ ಭವಿಷ್ಯ ನಿರ್ಮಿಸಲು ನಿರ್ಧರಿಸಿದೆ ಎಂದರು.

500 GW ಹಸಿರು ಇಂಧನ ಗುರಿ

ತೈಲ-ಅನಿಲದ ನಿಕ್ಷೇಪಗಳ ಕೊರತೆ ನಡುವೆಯೇ ಭಾರತ 2030 ರ ವೇಳೆಗೆ 500 GW ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿ ಹೊಂದಿದೆ. ಹಸಿರು ಇಂಧನ ಉತ್ಪಾದನೆ ಮತ್ತು ಉತ್ತೇಜನಕ್ಕೆ ಒಂದು ಆಂದೋಲನವೇ ನಡೆದಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಹಸಿರು ಇಂಧನಕ್ಕೆ ಉತ್ತೇಜನ; ಹಲವು ರಾಷ್ಟ್ರಗಳೊಂದಿಗೆ ಪ್ರಲ್ಹಾದ್‌ ಜೋಶಿ ದ್ವಿಪಕ್ಷೀಯ ಸಭೆ

ಸಮಾವೇಶದಲ್ಲಿ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಆಂಧ್ರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಗೋವಾ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.