Thursday, 19th December 2024

Rahul Gandhi: ರಾಹುಲ್‌ ಗಾಂಧಿ ವಿರುದ್ಧ ಕೊಲೆ ಯತ್ನದ ದೂರು ದಾಖಲಿಸಿದ ಬಿಜೆಪಿ

Rahul Gandhi

ಹೊಸದಿಲ್ಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ (BR Ambedkar) ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕರು ಗುರುವಾರ (ಡಿ. 19) ಸಂಸತ್‌ ಪರಿಸರದಲ್ಲಿ ಪ್ರತಿಭಟನೆ ನಡೆಸಿದರು. ಇತ್ತ ಬಿಜೆಪಿಯೂ ಕಾಂಗ್ರೆಸ್‌ ವಿರುದ್ಧ ಹೋರಾಟ ನಡೆಸಿತು. ಈ ಮೂಲಕ ಸಂಸತ್‌ ಗುರುವಾರ ಹೈ ಡ್ರಾಮಾಕ್ಕೆ ಸಾಕ್ಷಿಯಾಯಿತು. ಈ ಮಧ್ಯೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಬಿಜೆಪಿ ಕೊಲೆ ಪ್ರಕರಣ ದಾಖಲಿಸಿದೆ.

ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಅವರು ರಾಹುಲ್‌ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಘರ್ಷದಲ್ಲಿ ತಮ್ಮ ಪಕ್ಷದ ಇಬ್ಬರು ನಾಯಕರು ಗಾಯಗೊಂಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ವಿರುದ್ಧ ಹಲ್ಲೆ, ಪ್ರಚೋದನೆ ಮತ್ತು ಕೊಲೆ ಯತ್ನದ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಅನುರಾಗ್‌ ಠಾಕೂರ್‌, ʼʼಹಲ್ಲೆ ಮತ್ತು ಪ್ರಚೋದನೆಗಾಗಿ ರಾಹುಲ್ ಗಾಂಧಿ ವಿರುದ್ಧ ನಾವು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದೇವೆ. ಮಕರ್‌ ದ್ವಾರದ ಹೊರಗಡೆ ಎನ್‌ಡಿಎ ಸಂಸದರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಘರ್ಷ ನಡೆದಿದೆ. ಇದರ ವಿವರಗಳನ್ನು ನಾವು ಪೊಲೀಸರಿಗೆ ನೀಡಿದ್ದೇವೆ. ಸೆಕ್ಷನ್‌ 109, 115, 117, 125, 131 ಮತ್ತು 351ರ ಅಡಿ ನಾವು ದೂರು ನೀಡಿದ್ದೇವೆʼʼ ಎಂದು ವಿವರಿಸಿದ್ದಾರೆ. ಸೆಕ್ಷನ್‌ 109 ಕೊಲೆ ಯತ್ನವನ್ನು ಸೂಚಿಸಿದರೆ, ಸೆಕ್ಷನ್‌ 117 ಸ್ವಯಂಪ್ರೇರಿತವಾಗಿ ತೀವ್ರ ನೋವನ್ನು ಉಂಟು ಮಾಡುವುದಾಗಿದೆ.

ಕಾಂಗ್ರೆಸ್‌ ವಾದವೇನು?

ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸತ್‌ನ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದಾಗ, ಪ್ರವೇಶ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸಂಸದರು ನನ್ನನ್ನು ತಳ್ಳಿ ಬೆದರಿಕೆ ಹಾಕಿದರು ಎಂದು ಸಮರ್ಥಿಸಿಕೊಂಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ತಳ್ಳಲಾಯಿತು ಎಂದು ಆರೋಪಿಸಿದ್ದರು. ಸಂಸತ್ತಿನ ಹೊರಗೆ ಕಾಂಗ್ರೆಸ್ ಪ್ರತಿಭಟನೆ ವೇಳೆ ತನ್ನನ್ನು ಬಿಜೆಪಿ ಸಂಸದರು ತಳ್ಳಿ ಬೀಳಿಸಿದ್ದಾರೆ ಎಂದು ಇತ್ತ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಕೂಡ ದೂರಿದ್ದಾರೆ.

“ಬಿಜೆಪಿ ಸಂಸದರು ನನ್ನನ್ನು ತಳ್ಳಿ ಗಾಯಗೊಳಿಸಿದ್ದಾರೆ, ಸಂಸದರೊಂದಿಗೆ ಸಂಸತ್​ನ ಮಕರ ದ್ವಾರವನ್ನು ತಲುಪಿದಾಗ ನನ್ನನ್ನು ಬಿಜೆಪಿ ಸಂಸದರು ತಳ್ಳಿದ ಕಾರಣ ನಾನು ಆಯತಪ್ಪಿ ಕೆಳಗೆ ಬಿದ್ದೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೊಣ ಕಾಲುಗಳಿಗೆ ತೀವ್ರ ಗಾಯವಾಗಿದೆ , ಕಾಂಗ್ರೆಸ್ ಸಂಸದರು ಕುರ್ಚಿ ತಂದು ನನ್ನನ್ನು ಕೂರಿಸಿದರು” ಎಂದು ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಆರೋಗ್ಯ ಹೇಗಿದೆ?

ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಗಾಯಗೊಂಡಿದ್ದು, ಪ್ರಸ್ತುತ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ನಾಯಕರ ತಲೆಗೆ ಗಾಯಗಳಾಗಿದ್ದು, ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಅಜಯ್ ಶುಕ್ಲಾ ತಿಳಿಸಿದ್ದಾರೆ. 69 ವರ್ಷದ ಪ್ರತಾಪ್ ಸಾರಂಗಿ ಅವರಲ್ಲಿ ತೀವ್ರ ರಕ್ತಸ್ರಾವ ಕಂಡು ಬಂದಿತ್ತು. ಮುಖೇಶ್ ರಜಪೂತ್ ಪ್ರಜ್ಞೆ ಕಳೆದುಕೊಂಡಿದ್ದರು. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Pratap Chandra Sarangi: ಪ್ರತಿಭಟನೆ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಪ್ರತಾಪ್‌ ಸಾರಂಗಿ ಯಾರು? ಇವರ ಹಿನ್ನೆಲೆ ಏನು?