Saturday, 14th December 2024

Rahul Gandhi : ಲೋಕಸಭೆಯಲ್ಲಿ ಸಾವರ್ಕರ್‌ ವಿಷಯ ಉಲ್ಲೇಖಿಸಿ ರಾಹುಲ್‌ ಗಾಂಧಿ ವಾಗ್ದಾಳಿ!

Rahul Gandhi

ನವದೆಹಲಿ: ಲೋಕಸಭೆಯಲ್ಲಿ ನಡೆದ ಸಂವಿಧಾನದ ಚರ್ಚೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶನಿವಾರ ಕೇಂದ್ರ ಸರ್ಕಾರವನ್ನು (Central Government) ತರಾಟೆಗೆ ತೆಗೆದುಕೊಂಡರು ಮತ್ತು ಬಿಜೆಪಿಯು “ಸಂವಿಧಾನಕ್ಕಿಂತ ಮನುಸ್ಮೃತಿ ಹೆಚ್ಚು ಎಂದು ಪರಿಗಣಿಸುತ್ತದೆ ಎಂದು ಆರೋಪಿಸಿದರು.

ಮಹಾಭಾರತದ ದ್ರೋಣಾಚಾರ್ಯ ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿದಂತೆ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರವು ಭಾರತೀಯ ಯುವಕರು, ಉದ್ಯಮಗಳು ಮತ್ತು ಸಮಾಜದ ಇತರ ವರ್ಗಗಳ ಹೆಬ್ಬೆರಳುಗಳನ್ನು ಕತ್ತರಿಸುತ್ತಿದೆ ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ಸದನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಸರ್ಕಾರವನ್ನು ಟೀಕಿಸಿದ ಅವರು, ನೀವು ಧಾರಾವಿಯನ್ನು ಅದಾನಿಯವರಿಗೆ ನೀಡಿದ್ದೀರಿ. ಧಾರಾವಿಯ ಸಣ್ಣ ಉದ್ಯಮಗಳ ಹೆಬ್ಬೆರಳು ಕತ್ತರಿಸಿದ್ದೀರಿ. ನಂತರ ಬಂದರು, ವಿಮಾನ ನಿಲ್ದಾಣಗಳನ್ನು ಕೊಟ್ಟು ಅದನ್ನೇ ಮಾಡಿದ್ದೀರಿ. ಪ್ರಾಮಾಣಿಕ ವ್ಯವಹಾರ ಮಾಡುವವರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವರ್ಕರ್, ಮನುಸ್ಮೃತಿ ಬಗ್ಗೆ ವಾಗ್ದಾಳಿ

ಸದನದಲ್ಲಿ ವೀರ್ ಸಾವರ್ಕರ್ ಅವರ ವಿಷಯವನ್ನು ಪ್ರಸ್ತಾಪಿಸಿದ ರಾಹುಲ್‌ , ಸಾವರ್ಕರ್‌ ತಮ್ಮ ಬರವಣಿಗೆಯಲ್ಲಿ ಭಾರತದ ಸಂವಿಧಾನ ಏನೂ ಇಲ್ಲ, ಮನುಸ್ಮೃತಿಯಿಂದ ನಮ್ಮ ಸಂವಿಧಾನವನ್ನು ಬದಲಿಸಿ ಎಂದು ಬರೆದಿದ್ದಾರೆ. ನೀವು ಈ ಪುಸ್ತಕವನ್ನು ಅನುಸರಿಸುತ್ತೀರಾ ಎಂದು ನಾನು ಕೇಳುತ್ತೇನೆ ಏಕೆಂದರೆ ನೀವು ಸಂವಿಧಾನದ ಬಗ್ಗೆ ಮಾತನಾಡುವಾಗ ನೀವು ಸಾವರ್ಕರ್‌ರನ್ನು ದೂಷಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಸಾವರ್ಕರ್ ಅವರು ಉಲ್ಲೇಖಿಸಿದಂತೆ ಸಂವಿಧಾನ ಇಲ್ಲವಾದರೆ ನಿಮ್ಮ ಪಕ್ಷ ಸಂವಿಧಾನವನ್ನು ಒಪ್ಪುತ್ತದಯೇ ? ಹಾಗಾದರೆ ನೀವು ಸಂವಿಧಾನವನ್ನು ರಕ್ಷಿಸುವ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಾಗ, ನೀವು ಸಾವರ್ಕರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದೀರಿ, ನೀವು ಸಾವರ್ಕರ್ ಅವರನ್ನು ನಿಂದಿಸುತ್ತಿದ್ದೀರಿ, ನೀವು ಸಾವರ್ಕರ್ ಅವರನ್ನು ಮಾನಹಾನಿ ಮಾಡುತ್ತಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನೂ ಓದಿ : Rahul Gandhi: ರಾಹುಲ್‌ ಗಾಂಧಿ ವಿರುದ್ಧ ʻರಾಯಲ್‌ʼ ಲೀಡರ್ಸ್‌ ರೆಬೆಲ್‌- ರಾಜಮನೆತನಗಳ ಬಗ್ಗೆ ಕಾಂಗ್ರೆಸ್‌ ನಾಯಕ ಹೇಳಿದ್ದೇನು?