Wednesday, 11th December 2024

Rahul Gandhi: ಸಂಸತ್ತಿನ ಎದುರು ವಿಪಕ್ಷಗಳ ಪ್ರತಿಭಟನೆ… ರಕ್ಷಣಾ ಸಚಿವರಿಗೆ ಬಾವುಟ, ಗುಲಾಬಿ ಕೊಟ್ಟ ರಾಹುಲ್‌ !

Rahul Gandhi

ನವದೆಹಲಿ: ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಪ್ರತಿಪಕ್ಷದ ವಿರುದ್ಧ ವಿರೋಧ ಪಕ್ಷದಗಳ ಪ್ರತಿಭಟನೆಯೂ ಜೋರಾಗಿಯೇ ಇದೆ. ಮಾಸ್ಕ್‌, ಬ್ಯಾಗ್‌ ಹಾಗೂ ಟೀ ಶರ್ಟ್‌ಗಳ ನಂತರ ಈ ಬಾರಿ ಬಾವುಟ ಹಾಗೂ ಗುಲಾಬಿ ಹಿಡಿದು ಬುಧವಾರ ಕಾಂಗ್ರೆಸ್‌ ಸಂಸದರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆಗಷ್ಟೇ ಸಂಸತ್ತಿಗೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರಿಗೆ ಬಾವುಟವನ್ನು ನೀಡಿದ್ದಾರೆ.

ಬುಧವಾರ ಗುಲಾಬಿ ಹೂವು ಹಾಗೂ ಬಾವುಟವನ್ನು ಹಿಡಿದು ಕಾಂಗ್ರೆಸ್‌ ಸಂಸದರು ದೇಶವನ್ನು ಮಾರಬೇಡಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ಸಂಸದೆ ವರ್ಷಾ ಗಾಯಕ್ವಾಡ್ ಮಾತನಾಡಿ ನಾವು ಬಿಜೆಪಿಗರಿಗೆ ರಾಷ್ಟ್ರಧ್ವಜವನ್ನು ವಿತರಣೆ ಮಾಡಿ ದೇಶವನ್ನು ಮಾರಬೇಡಿ ಎಂದು ವಿನಂತಿಸಿಕೊಂಡಿದ್ದೇವೆ. ಆದರೆ ದುರದೃಷ್ಟವಶಾತ್, ಅದಾನಿಯಂತಹ ಉದ್ಯಮಿಗಳು ದೇಶವನ್ನು ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸರ್ಕಾರ ಅಧಿಕಾರವನ್ನು ಅವರ ಕೈಗೆ ನೀಡಿದೆ. ಬಡವರ ಧ್ವನಿಯನ್ನು ಹತ್ತಿಕ್ಕಲಾಗಿದೆ. ದೇಶವನ್ನು ಮಾರಾಟ ಮಾಡುವ ಈ ಷಡ್ಯಂತ್ರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮಂಗಳವಾರ, ವಯನಾಡ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಾಂಗ್ರೆಸ್ ಸಂಸದರು ‘ಅದಾನಿ-ಮೋದಿ’ ಬ್ಯಾಗ್‌ಗಳನ್ನು ಧರಿಸಿ ಪ್ರತಿಭಟನೆ ನಡೆಸಿದ್ದರು. ಸೋಮವಾರ, ಪ್ರಧಾನಿ ಮತ್ತು ಹಲವಾರು ಉದ್ಯಮಿಗಳ ಮುಖವಾಡಗಳನ್ನು ಧರಿಸಿ, ರಾಹುಲ್ ಗಾಂಧಿ ಅಣಕು ಪ್ರದರ್ಶನವನ್ನು ನಡೆಸಿದ್ದರು. ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾದಗಿನಿಂದಲೂ ಕಾಂಗ್ರೆಸ್‌ ಹಾಗೂ ಮೈತ್ರಿಕೂಟಗಳು ಪ್ರತಿಭಟನೆ ನಡೆಸುತ್ತಿವೆ.

ಏತನ್ಮಧ್ಯೆ, ಪ್ರತಿಪಕ್ಷಗಳ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಪಕ್ಷಪಾತ ಹಾಗೂ ಪ್ರತಿಪಕ್ಷ ನಾಯಕರು ಮಾತನಾಡಲು ನೀಡುವ ಸಮಯದ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ ವಿರುದ್ಧ ಮಂಗಳವಾರ ಬೆಳಿಗ್ಗೆ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ.

ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕಿರುವ ಸಭಾಪತಿ ಜಗದೀಪ್‌ ಧನಕರ್‌ ಅವರು ಆಡಳಿತ ಪಕ್ಷದ ಪರವಾಗಿ ನಿಂತಿದ್ದಾರೆ. ಪ್ರತಿಪಕ್ಷ ನಾಯಕರು ಮಾತನಾಡುವಾಗ ಪದೇ ಪದೆ ಅಡ್ಡಿಪಡಿಸುತ್ತಾರೆ. ಸದನದ ಸದಸ್ಯರ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌, ಸಮಾಜವಾದಿ ಪಕ್ಷ ಹಾಗೂ ಆಪ್‌ ಸಂಸದರು ಹಲವು ಬಾರಿ ಆರೋಪಿಸಿದ್ದರು.

ಈ ಸುದ್ದಿಯನ್ನೂ ಓದಿ : Rahul Gandhi: ರಾಹುಲ್‌ ಗಾಂಧಿ ವಿರುದ್ಧ ʻರಾಯಲ್‌ʼ ಲೀಡರ್ಸ್‌ ರೆಬೆಲ್‌- ರಾಜಮನೆತನಗಳ ಬಗ್ಗೆ ಕಾಂಗ್ರೆಸ್‌ ನಾಯಕ ಹೇಳಿದ್ದೇನು?