Saturday, 14th December 2024

ರಾಹುಲ್ ಗಾಂಧಿ ’ನಕಲಿ ಜ್ಯೋತಿಷಿ’: ಪ್ರಹ್ಲಾದ್ ಜೋಶಿ ವಾಗ್ದಾಳಿ

ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಹುಲ್ ಅವರನ್ನು ನಕಲಿ ಜ್ಯೋತಿಷಿ ಎಂದು ಕರೆದಿದ್ದಾರೆ.

ಕಲ್ಲಿದ್ದಲು ಬಿಕ್ಕಟ್ಟು ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಸಂಬಂಧ ಪ್ರಹ್ಲಾದ್ ಜೋಶಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ, ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ ನಕಲಿ ಜ್ಯೋತಿಷಿಯಾಗುತ್ತಿದ್ದಾರೆ, ದೇಶದಲ್ಲಿ ಕಲ್ಲಿದ್ದಲು ಕೊರತೆಯಿಂದ ಏನಾಗುತ್ತದೆ ಎಂಬುದನ್ನು ಹೇಳುವ ಬದಲು, ಅವರ ಸರ್ಕಾರದ ಅವಧಿಯಲ್ಲಿ ಎಷ್ಟು ಕಲ್ಲಿದ್ದಲು ಹಗರಣ ನಡೆದಿದೆ ಮತ್ತು ದೇಶಕ್ಕೆ ಎಷ್ಟು ನಷ್ಟವಾಗಿದೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದ್ದಾರೆ.

ಶುಕ್ರವಾರ ಹೇಳಿಕೆ ನೀಡಿದ್ದ ರಾಹುಲ್, ದೇಶದಲ್ಲಿ ಕಲ್ಲಿದ್ದಲು ಮತ್ತು ವಿದ್ಯುತ್ ಬಿಕ್ಕಟ್ಟು ತೀವ್ರವಾಗಿರುವುದರಿಂದ ದೇಶ ಹಾಗೂ ಜನರ ಬಗೆಗಿನ ಕಾಳಜಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರಧಾನಿ ಹೇಳಬೇಕು.

ಇಂದು ಕಲ್ಲಿದ್ದಲು ಮತ್ತು ವಿದ್ಯುತ್ ಬಿಕ್ಕಟ್ಟು ದೇಶಾದ್ಯಂತ ತಲೆದೋರಿದೆ. ಈ ಬಿಕ್ಕಟ್ಟು ಸಣ್ಣ ಕೈಗಾರಿಕೆಗಳನ್ನು ನಾಶಪಡಿಸಲಿದೆ. ಇದರಿಂದಾಗಿ ಮುಂದೆ ನಿರುದ್ಯೋಗ ಪ್ರಮಾಣ ಹೆಚ್ಚಲಾಗಿದೆ. ರೈಲು, ಮೆಟ್ರೋ ಸೇವೆ ಸ್ಥಗಿತದಿಂದ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಹೇಳಿದ್ದರು.