Wednesday, 11th December 2024

Rajasthan Borewell Disaster: ಮೂರು ದಿನಗಳಿಂದ ಕೊಳವೆ ಬಾವಿಯಲ್ಲಿ ಸಿಲುಕಿರುವ ಬಾಲಕ- ರಕ್ಷಣೆಗೆ ನಡೀತಿದೆ ಹರಸಾಹಸ

ನವದೆಹಲಿ: ರಾಜಸ್ಥಾನದ (Rajasthan) ದೌಸಾ (Dausa) ಎಂಬಲ್ಲಿ ಬೋರ್ ವೆಲ್ ಗೆ (Rajasthan Borewell Disaster) ಬಾಲಕ ಬಿದ್ದಿರುವ ದುರಂತ ಸಂಭವಿಸಿದ್ದು. ಈ ಘಟನೆ ನಡೆದು ಮೂರು ದಿನ ಕಳೆದರೂ ಬಾಲಕನನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ತೆರೆದ ಕೊಳವೆ ಬಾವಿಗೆ, ಆರ್ಯನ್ ಹೆಸರಿನ ಐದು ವರ್ಷ ಪ್ರಾಯದ ಬಾಲಕ ಡಿ.09ರಂದು ಬಿದ್ದಿದ್ದು ಇದೀಗ ಬಾಲಕನನ್ನು ಸುರಕ್ಷಿತವಾಗಿ ಹೊರ ತೆಗೆಯಲು 150 ಅಡಿ ಆಳದ ಹೊಂಡ ತೆಗೆಯಲು ರಿಗ್ ಯಂತ್ರಗಳನ್ನು (Piling Rig) ಬಳಸಲಾಗುತ್ತಿದೆ.

ಇಲ್ಲಿನ, ಕಾಲಿಖಾಡ್ (Kalikha) ಗ್ರಾಮದಲ್ಲಿ ಗದ್ದೆಯೊಂದರಲ್ಲಿ ಆಟವವಾಡುತ್ತಿದ್ದ ಐದು ವರ್ಷದ ಆರ್ಯನ್ ಡಿ.9 ರ ಸೋಮವಾರದಂದು ಸಾಯಂಕಾಲದ ಹೊತ್ತಿಗೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಮಾಹಿತಿ ತಿಳಿದ ಕೂಡಲೇ ಸಾಯಂಕಾಲ 4 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಬಾಲಕ ಬಿದ್ದಿರುವ ಈ ಕೊಳವೆ ಬಾವಿಯ ಪಕ್ಕದಲ್ಲೇ ಸಮಾನಾಂತರಾವಾಗಿ ಹೊಂಡ ತೆಗೆಯಲು ಜೆಸಿಬಿ ಯಂತ್ರಗಳನ್ನು ಹಾಗು ಟ್ರ್ಯಾಕ್ಟರ್ ಗಳನ್ನು ನಿಯೋಜಿಸಲಾಗಿತ್ತು. ಇನ್ನೊಂದೆಡೆ ಹಗ್ಗ ಮತ್ತು ಇನ್ನಿತರ ಸಲಕರಣೆಗಳ ಮೂಲಕ ಬಾಲಕನನ್ನು ರಕ್ಷಿಸುವ ಕೆಲಸವನ್ನೂ ಪ್ರಾರಂಭಿಸಲಾಗಿತ್ತು.

ಕೊಳವೆ ಬಾವಿಗೆ ಬಿದ್ದಿರುವ ಮಗುವಿಗೆ ಪೈಪೊಂದರ ಮೂಲಕ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಮಗುವಿನ ದೇಹ ಸ್ಥಿತಿ ಇದೀಗ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಡಿ.10ರ ರಾತ್ರಿ ಘಟನಾ ಸ್ಥಳದಲ್ಲಿ ಎಕ್ಸ್.ಸಿ.ಎಂ.ಜಿ. 180 ಪೈಲಿಂಗ್ ರಿಗ್ ಗಳನ್ನು ತಂದಿರಿಸಲಾಗಿದೆ ಎಂದು ಎ.ಎನ್.ಐ. (ANI) ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಕೊಳವೆ ಬಾವಿಯೊಳಗಿರುವ ಬಾಲಕ ಆರ್ಯನ್ ಸುರಕ್ಷಿತ ರಕ್ಷಣೆಗಾಗಿ ಸಮರೋಪಾದಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ 42 ಗಂಟೆಗಳನ್ನು ದಾಟಿ ಮುಂದುವರಿಯುತ್ತಿದೆ. 70 ಅಡಿಗಳವರೆಗೆ ಸಮಾನಾಂತರ ಸುರಂಗವನ್ನು ತೋಡಲಾಗುತ್ತಿದೆ, ಇಲ್ಲಿ ಉಷ್ಣತೆ 8 ಡಿಗ್ರಿ ಸೆಲ್ಷಿಯಸ್‌ಗೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇದಕ್ಕೂ ಮೊದಲು, 2023ರಲ್ಲಿ ಉತ್ತರಕಾಶಿಯಲ್ಲಿ ಸಂಭವಿಸಿದ್ದ ಸುರಂಗ ಕುಸಿತ ಸಂತ್ರಸ್ತರನ್ನು ರಕ್ಷಿಸಲು ಬಳಸಲಾಗಿದ್ದ ಅಂಬ್ರೆಲ್ಲಾ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಯಿತಾದರೂ ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF), ರಾಜ್ಯ ವಿಪತ್ತು ನಿರ್ವಹಣಾ ದಳ (SDRF) ಹಾಗೂ ನಾಗರಿಕ ರಕ್ಷಣಾ ತಂಡಗಳು ಈಗಾಗಲೇ ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿವೆ ಎಂದು ದೌಸಾ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಈ ಸುದ್ದಿಯನ್ನೂ ಓದಿ: Mohan Babu: ಮೈಕ್‌ ಕಿತ್ತುಕೊಂಡು ಪತ್ರಕರ್ತನಿಗೆ ಅದ್ರಲ್ಲೇ ಥಳಿಸಿದ ನಟ ಮೋಹನ್‌ ಬಾಬು- ಅಷ್ಟಕ್ಕೂ ತಡರಾತ್ರಿ ನಡೆದಿದ್ದೇನು?

ಸದ್ಯಕ್ಕೆ ಕೊಳವೆ ಬಾವಿಯೊಳಗಿರುವ ಬಾಲಕನ ಆರೊಗ್ಯವನ್ನು ಕೆಮರಾದ ಮೂಲಕ ನಿರಂತರ ನಿಗಾ ವಹಿಸಲಾಗಿದೆ. ಘಟನಾ ಸ್ಥಳಕ್ಕೆ ರಾಜಸ್ಥಾನದ ಸಚಿವ ಬಿಜೆಪಿ ನಾಯಕ ಕಿರೋಡಿ ಲಾಲ್ ಮೀನಾ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

‘ಇಂತಹ ಘಟನೆಗಳು ದೇಶಾದ್ಯಂತ ನಡೆಯುತ್ತಿದೆ. ತೆರೆದ ನಿಷ್ಕ್ರಿಯ ಕೊಳವೆ ಬಾಯಿಯನ್ನು ಮುಚ್ಚಲು ಸರಕಾರದ ನಿರ್ದೇಶನಿದೆಯಾದರೂ ಅದಕ್ಕೆ ಸೂಕ್ತ ಕಾನೂನು ವ್ಯವಸ್ಥೆಯಿಲ್ಲ. ಈ ವಿಚಾರದಲ್ಲಿ ಕಠಿಣ ಕಾನೂನು ಜಾರಿಗೊಳಿಸುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ, ದೌಸಾದ ಬಂಡಿಕುಯಿ ಪ್ರದೇಶದ‍ಲ್ಲಿ 35 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಹೆಣ್ಣು ಮಗುವನ್ನು ನಿರಂತರ 18 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿತ್ತು.