Tuesday, 10th December 2024

Rajasthan High Drama: ಅಧಿಕಾರಿಗೆ ಕಪಾಳಮೋಕ್ಷ ಕೇಸ್‌; ಪಕ್ಷೇತರ ಅಭ್ಯರ್ಥಿ ಅರೆಸ್ಟ್‌- ಬೆಂಬಲಿಗರಿಂದ ಕಲ್ಲು ತೂರಾಟ, ಬೆಂಕಿ ಹಚ್ಚಿ ಭಾರೀ ಹಿಂಸಾಚಾರ

Rajasthan High drama

ಜೈಪುರ: ಕರ್ತವ್ಯ ನಿರತ ಅಧಿಕಾರಿಗೆ ಕಪಾಳಮೋಕ್ಷ(Slapping) ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಡಿಯೋಲಿ-ಉನಿಯಾರಾ ಕ್ಷೇತ್ರದ ಉಪಚುನಾವಣೆಯ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ(Naresh Meena) ಅವರನ್ನು ಅರೆಸ್ಟ್‌ ಮಾಡಲಾಗಿದೆ(Rajasthan High Drama). ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅಮಿತ್ ಚೌಧರಿ(Amit Choudhary) ಅವರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ನರೇಶ್‌ ಮೀನಾ ಅವರನ್ನು ಅರೆಸ್ಟ್‌ ಮಾಡಲು ಪೊಲೀಸರು ಮುಂದಾದಾಗ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಗಲಭೆಕೋರರು ಅಧಿಕಾರಿಗಳ ಮೇಲೆ ಕಲ್ಲು ಎಸೆದರು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ನರೇಶ್ ಮೀನಾ ಅವರನ್ನು ಪೊಲೀಸರು ಬಂಧಿಸಲು ಮುಂದಾದಾಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನರೇಶ್‌ ಮೀನಾ ಅವರ ಬೆಂಬಲಿಗರು ಅಧಿಕಾರಿಗಳ ಮೇಲೆ ಕಲ್ಲು ಎಸೆದರು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದರು. ಅಶಾಂತಿಗೆ ಸಂಬಂಧಿಸಿದಂತೆ ಕನಿಷ್ಠ 60 ಜನರನ್ನು ಬಂಧಿಸಲಾಗಿದೆ ಎಂದು ಅಜ್ಮೀರ್ ರೇಂಜ್ ಐಜಿ ಓಂ ಪ್ರಕಾಶ್ ತಿಳಿಸಿದ್ದಾರೆ. ಸುಮಾರು 24 ದೊಡ್ಡ ವಾಹನಗಳು ಮತ್ತು 48 ಮೋಟಾರು ಸೈಕಲ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವಾರು ಮನೆಗಳಿಗೆ ಗಮನಾರ್ಹ ಹಾನಿಯಾಗಿದೆ. ಇನ್ನು ಶಾಂತಿ-ಸುವ್ಯವಸ್ಥೆ ಪುನಃಸ್ಥಾಪಿಸಲು ವಿಶೇಷ ಕಾರ್ಯಪಡೆ (STF) ತುಕಡಿಗಳನ್ನು ನಿಯೋಜಿಸಲಾಗಿದೆ.

ಏನಿದು ಘಟನೆ?

ಸಂರವತ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಮತಗಟ್ಟೆಗೆ ತೆರಳಿದ್ದ ಮೀನಾ ಅವರು, ಚುನಾವಣಾ ಪ್ರೋಟೋಕಾಲ್ ಅನ್ನು ಮೇಲ್ವಿಚಾರಣೆ ಮಾಡಲು ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ಮಾಡದಂತೆ ತಡೆದಿದ್ದಾರೆ. ಸಾಮ್ರಾವತಾ ಗ್ರಾಮದ ನಿವಾಸಿಗಳು ಉಪಚುನಾವಣೆ ಬಹಿಷ್ಕಾರಿಸುವುದಾಗಿ ಘೋಷಿಸಿದ್ದರು. ಗ್ರಾಮಸ್ಥರಿಗೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಬೆಂಬಲ ವ್ಯಕ್ತಪಡಿಸಿದರು. ಆದರೆ ಉಪಚುನಾವಣೆಯ ಏರಿಯಾ ಮ್ಯಾಜಿಸ್ಟ್ರೇಟ್ ಚೌಧರಿ ಅವರು ಮತ ಚಲಾಯಿಸುವಂತೆ ಜನರನ್ನು ಮನವೊಲಿಸಲು ಗ್ರಾಮಕ್ಕೆ ಹೋದಾಗ, ಪಕ್ಷೇತರ ಅಭ್ಯರ್ಥಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಟೋಂಕ್ ಕಲೆಕ್ಟರ್ ಸೌಮ್ಯ ಝಾ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಯುವ ಕುಸ್ತಿಪಟುವಿಗೆ ಸಂಸದನಿಂದಲೇ ಕಪಾಳಮೋಕ್ಷ..?