Friday, 13th December 2024

ರಾಜೀವ್‌ ಗಾಂಧಿ ಹತ್ಯೆ ಪ್ರಕರಣ: ಅಪರಾಧಿಗಳು ಶ್ರೀಲಂಕಾಕ್ಕೆ ಗಡಿಪಾರು

ಚೆನ್ನೈ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳಾದ ಮುರುಗನ್‌, ರಾಬರ್ಟ್‌ ಮತ್ತು ಜಯಕುಮಾರ್‌ ಸೇರಿದಂತೆ ಮೂವರನ್ನು ಬುಧವಾರ ಚೆನ್ನೈ ವಿಮಾನ ನಿಲ್ದಾಣದಿಂದ ಶ್ರೀಲಂಕಾಕ್ಕೆ ಗಡಿಪಾರು ಮಾಡಲಾಯಿತು ಎಂದು ವರದಿ ತಿಳಿಸಿದೆ.

ಜೈಲಿನಲ್ಲಿ ಅಪರಾಧಿಗಳ ಉತ್ತಮ ನಡವಳಿಕೆಯನ್ನು ಪರಿಗಣಿಸಿ ಮೂವರನ್ನು ಬಿಡುಗಡೆಗೊಳಿಸಲು ತಮಿಳುನಾಡು ಸರ್ಕಾರ ಶಿಫಾರಸ್ಸು ಮಾಡಿದ್ದು, ಅದರಂತೆ 2022ರ ನವೆಂಬರ್‌ ನಲ್ಲಿ ಸುಪ್ರೀಂಕೋರ್ಟ್‌, ರಾಜೀವ್‌ ಗಾಂಧಿ ಹಂತಕರಾದ ಮುರುಗನ್‌, ರಾಬರ್ಟ್‌ ಪಾಯಸ್‌, ಜಯಕುಮಾರ್‌ ಸೇರಿದಂತೆ ಆರು ಮಂದಿಯನ್ನು ಬಿಡುಗಡೆಗೊಳಿಸಲು ಆದೇಶ ನೀಡಿತ್ತು.

ಶ್ರೀಲಂಕಾ ಪ್ರಜೆಗಳಾದ ಮೂವರನ್ನು ತಿರುಚಿರಾಪಲ್ಲಿಯ ವಿಶೇಷ ಶಿಬಿರದಲ್ಲಿ ಬಿಗಿ ಬಂದೋಬಸ್ತ್‌ ನಲ್ಲಿ ಇರಿಸಲಾಗಿತ್ತು. ಪೊಲೀಸ್‌ ಅಧಿಕಾರಿಗಳ ತಂಡ ಮೂವರನ್ನು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದು, ಶ್ರೀಲಂಕಾಕ್ಕೆ ಗಡಿಪಾರು ಮಾಡಲಾಯಿತು ಎಂದು ವರದಿ ತಿಳಿಸಿದೆ.

ಶ್ರೀಲಂಕಾ ಪ್ರಜೆ ಮುರುಗನ್‌ ಆರೋಪಿ ನಳಿನಿಯನ್ನು ವಿವಾಹವಾಗಿದ್ದ. ಬೆಳಗ್ಗೆ ನಳಿನಿ, ಪತಿ ಮುರುಗನ್‌ ಜತೆ ವಿಮಾನ ನಿಲ್ದಾಣದಲ್ಲಿ ಸಾಥ್‌ ನೀಡಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿದೆ.

ಈ ಪ್ರಕರಣದಲ್ಲಿ ದಿ.ರಾಜೀವ್‌ ಗಾಂಧಿ ಪತ್ನಿ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿ, ಗರ್ಭಿಣಿಯಾಗಿದ್ದ ನಳಿನಿಯ ಗಲ್ಲುಶಿಕ್ಷೆ ಯನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆ ಕೊಡುವಂತೆ ಸುಪ್ರೀಂಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಜೀವದಾನ ಪಡೆದ ನಳಿನಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ನಳಿನಿ ಪುತ್ರಿ ಯುನೈಟೆಡ್‌ ಕಿಂಗ್‌ ಡಮ್‌ ನಲ್ಲಿ ವೈದ್ಯೆಯಾಗಿದ್ದಾಳೆ.

ಸುಪ್ರೀಂಕೋರ್ಟ್‌ ಆದೇಶದಂತೆ ಪೆರಾರಿವಳನ್‌, ನಳಿನಿ ಮತ್ತು ರವಿಚಂದ್ರನ್‌ ಸೇರಿದಂತೆ ಮೂವರನ್ನು ಜೈಲಿನಿಂದ ಬಿಡುಗಡೆ ಗೊಂಡಿದ್ದರು.