Wednesday, 11th December 2024

2023ರ ಡಿಸೆಂಬರ್ ವೇಳೆಗೆ ರಾಮ ಮಂದಿರ ಪ್ರವೇಶ ಮುಕ್ತ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ ರಾಮ ಮಂದಿರ 2023ರ ಡಿಸೆಂಬರ್ ವೇಳೆಗೆ ಪ್ರವೇಶ ಮುಕ್ತವಾಗಲಿದೆ ಎಂದು ಬುಧವಾರ ವರದಿಯಾಗಿದೆ.

2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ನೆರವೇರಿ ಸಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರದ ಕಾಮಗಾರಿ ನಡೆಯುತ್ತಿದ್ದು, ಸದ್ಯ ದೇವಾಲಯದ ಅಡಿಪಾಯದ ಕೆಲಸ ನಡೆಸಲಾಗುತ್ತಿದೆ. ಸೆಪ್ಟೆಂಬರ್ 15ರ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳ ಲಿದೆ. ದೀಪಾವಳಿ ಹಬ್ಬದ ಬಳಿಕ ಎರಡನೇ ಹಂತದ ಕಾಮಗಾರಿ ಆರಂಭಿಸುವ ಸಾಧ್ಯತೆಯಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ, ಸೀತಾಮಾತೆ ತಂಗಿದ್ದ ಐತಿಹ್ಯವಿರುವ ಶ್ರೀಲಂಕಾದ ಸೀತಾ ಇಲಿಯಾದಲ್ಲಿನ ಅಶೋಕ ವಟಿಕದ ಕಲ್ಲೊಂದನ್ನು ಬಳಸಲು ತೀರ್ಮಾನಿಸಲಾಗಿದ್ದು, ಆ ಕಲ್ಲನ್ನು ಅಲ್ಲಿಂದ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ. ಸೀತೆಯನ್ನು ಅಪಹರಿಸಿದ್ದ ರಾವಣ, ಆಕೆಯನ್ನು ಅಶೋಕ ವಟಿಕ ಉದ್ಯಾನದಲ್ಲಿ ಬಂಧನದಲ್ಲಿರಿಸಿದ್ದ. ಸೀತೆಯು ತಾನು ಬಂಧಿಯಾಗಿದ್ದ ಸಂದರ್ಭ ರಾಮನ ಬರುವಿಕೆಗೆ ಎದುರು ನೋಡುತ್ತಾ ಕುಳಿತಿದ್ದ ಕಲ್ಲನ್ನು ಶ್ರೀಲಂಕಾದಿಂದ ತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ. ಶ್ರೀಲಂಕಾದ ಸೀತಾ ಇಲಿಯಾ ಗ್ರಾಮದಲ್ಲಿ ಸೀತಾ ಮಾತೆಗೆ ದೇವಾಲಯವನ್ನೂ ನಿರ್ಮಿಸಲಾಗಿದೆ.

ಆ ಕಲ್ಲನ್ನು ಅಯೋಧ್ಯೆ ರಾಮ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. “ಸೀತಾಮಾತೆ ಬಳಕೆ ಮಾಡಿದ್ದ ಕಲ್ಲು ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಬಳಕೆಯಾಗುತ್ತಿರುವುದು ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯ ವೃದ್ಧಿಯಾಗ ಲಿದೆ” ಎಂದು ಭಾರತದಲ್ಲಿನ ಶ್ರೀಲಂಕಾ ಹೈಕಮಿಷನರ್ ಮಿಲಿಂದಾ ಮೊರಾಗೊಡಾ ಹೇಳಿದ್ದಾರೆ.

“ರಾಮ ಮಂದಿರ ನಿರ್ಮಣವಾಗುತ್ತಿರುವ ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಯುಪಿ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರವು ಸುಮಾರು 1,000 ಕೋಟಿ ರೂ., ಹಾಗೂ ಕೇಂದ್ರ ಸರ್ಕಾರವು 250 ಕೋಟಿ ರೂ. ನೀಡಿದೆ,” ಎಂದು ಮುಖ್ಯಮಂತ್ರಿ ತಿಳಿಸಿದ್ದರು.