ಮುಂಬೈ: ಮನೆ ಮನ ತಲುಪಿರುವ ರಸ್ನಾ ಜ್ಯೂಸ್ ಕಂಪನಿ ಸಂಸ್ಥಾಪಕ ಅರೀಜ್ ಪಿರೋಜ್‌ಶಾ ಖಂಬಟ್ಟಾ (85) ಅವರು ನಿಧನ ರಾಗಿದ್ದಾರೆ.
‘ಭಾರತದ ಉದ್ಯಮ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ, ಅದರಲ್ಲೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಮನ ಸೆಳೆದಿದ್ದ ಅರೀಜ್ ಪಿರೋಜ್‌ಶಾ ಖಂಬಟ್ಟಾ ನಿಧನರಾಗಿದ್ದಾರೆ ಎಂಬುದಾಗಿ ತಿಳಿಸಲು ವಿಷಾದಿಸುತ್ತೇವೆ’ ಎಂದು ರಸ್ನಾ ಗ್ರೂಪ್ ಪ್ರಕಟಣೆ ತಿಳಿಸಿದೆ.
ಅಹಮದಾಬಾದ್ ಮೂಲದ ಅರೀಜ್ ಪಿರೋಜ್‌ಶಾ ಅವರು 1970ರ ದಶಕದಲ್ಲಿ ರಸ್ನಾ ಜ್ಯೂಸ್ ಕಂಪನಿ ಆರಂಭಿಸಿದರು. ದುಬಾರಿ ಪಾನೀಯಗಳಿಗೆ ಸೆಡ್ಡೊಡೆಯಲೆಂದೇ ಸ್ಥಾಪಿಸಿದ ಕಂಪನಿಯು ಕೆಲವೇ ವರ್ಷಗಳಲ್ಲಿ ದೇಶದ ಮನೆಮಾತಾಯಿತು.
ಸದ್ಯ, ದೇಶದ 18 ಲಕ್ಷ ಚಿಲ್ಲರೆ ಮಳಿಗೆಗಳಲ್ಲಿ, ಅಂಗಡಿಗಳಲ್ಲಿ ರಸ್ನಾ ಪ್ಯಾಕೆಟ್ ಸಿಗುತ್ತದೆ. ಹಾಗೆಯೇ, ಜಗತ್ತಿನ 60 ರಾಷ್ಟ್ರಗಳಲ್ಲಿ ದೇಶೀಯ ಪಾನೀಯ ಲಭ್ಯವಿದೆ. ಇದೆಲ್ಲದರ ಹಿಂದೆ ಖಂಬಟ್ಟಾ ಅವರ ಶ್ರಮ ನಿರ್ಣಾಯಕವಾಗಿದೆ.