Saturday, 14th December 2024

Ratan Tata: ರತನ್‌ ಟಾಟಾ ಬಗ್ಗೆ ನೆಚ್ಚಿನ ಗೆಳೆಯ ಶಾಂತನು ಹೇಳಿದ್ದೇನು? ಭಾರೀ ವೈರಲ್‌ ಆಗ್ತಿದೆ ಇನ್‌ಸ್ಟಾ ಪೋಸ್ಟ್

Ratan tata

ನವದೆಹಲಿ: ಕೆಲವು ದಿನಗಳ ಹಿಂದೆ ದೀರ್ಘಕಾಲಿಕ ಅನಾರೋಗ್ಯದಿಂದ ವಿಧಿವಶರಾಗಿದ್ದ ರತನ್‌ ಟಾಟಾ(Ratan Tata) ಅವರ ನೆಚ್ಚಿನ ಯುವ ಗೆಳೆಯ ಶಾಂತನು ನಾಯ್ಡು(Shantanu Naidu) ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ವೊಂದು ಭಾರೀ ವೈರಲ್‌ ಆಗುತ್ತಿದೆ. ರತನ್‌ ಟಾಟಾ ಅವರು ಇಹಲೋಕ ತ್ಯಜಿಸಿದ ಮೂರು ದಿನಗಳ ನಂತರ ಶಾಂತನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಭಾವನಾತ್ಮಕ ಪೋಸ್ಟ್ ಅನ್ನು ಪ್ರಕಟಿಸಿದ್ದಾರೆ.

ಅವರ ಭಾವನಾತ್ಮಕ ಪೋಸ್ಟ್‌ನಲ್ಲಿ ರತನ್ ಟಾಟಾ ಅವರ ಆಪ್ತ ಸಹಾಯಕ ಶಾಂತನು ಅವರು ತಮ್ಮ ಮಾರ್ಗದರ್ಶಕ ಮತ್ತು ಸ್ನೇಹಿತ ಇನ್ನಿಲ್ಲ ಎಂಬುದು ನಂಬಲಸಾಧ್ಯ. ಕೊನೆಗೂ ಶಾಂತವಾಗಿ ಕುಳಿತು ಎಲ್ಲವನ್ನೂ ಅವಲೋಕಿಸಲು ಪ್ರಾರಂಭಿಸಿದ್ದೇನೆ. ಅವರು ಮತ್ತೊಮ್ಮೆ ನಗುವುದನ್ನು ಮತ್ತು ಅವರನ್ನು ನಗಿಸಲು ನನಗೆ ಸಾಧ್ಯವಿಲ್ಲ ಎಂಬ ವಿಚಾರವನ್ನು ಒಪ್ಪಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.

ಕಳೆದ 3 ದಿನಗಳಲ್ಲಿ, ನನಗೆ ದೇಶದಾದ್ಯಂತದ ಅನೇಕ ಜನರಿಂದ ಹಲವಾರು ಸಂದೇಶಗಳು ಬಂದಿವೆ. ಅವುಗಳನ್ನು ಓದುವಾಗ, ನೀವು ಮತ್ತು ನಾನು ವರ್ಷಗಳ ಕಾಲ ಕುಟುಂಬದ ಭಾಗವಾಗಿದ್ದೇವೆ ಎಂದು ಅನಿಸುತ್ತದೆ. ನಿಮ್ಮ ಸಾಂತ್ವನದ ಸಂದೇಶ ನನ್ನನ್ನು ದುಃಖದಿಂದ ಹೊರಬರಲು ಸಹಾಯ ಮಾಡುತ್ತಿದೆ ಎಂದು ಬರೆದಿದ್ದಾರೆ.

ಇನ್ನು ಅಕ್ಟೋಬರ್ 10 ರಂದು (ಗುರುವಾರ) ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅವರ ಅಂತ್ಯಕ್ರಿಯೆ ನೆರವೇರಲು ಸಹಕರಿಸಿದ ಮುಂಬೈ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು. ಮುಂಬೈ ಪೊಲೀಸರು ಟಾಟಾ ಅವರನ್ನು ಬಹಳ ಗೌರವಯುತವಾಗಿ ಕಳುಹಿಸಿದರು. “ಮುಂಬೈನ ಈ ಉದಾರ ಪೋಲೀಸರು ಎಷ್ಟು ಕರುಣಾಮಯಿಯಾಗಿದ್ದರು ಎಂದರೆ ಅವರು ಇಡೀ ನಗರವನ್ನು ಬಹಳ ಸಮರ್ಪಕವಾಗಿ ನಿಭಾಯಿಸಿದರು. ಇದು ವಿದಾಯ ಉಡುಗೊರೆಯಂತೆ ಭಾಸವಾಯಿತು. ಧನ್ಯವಾದಗಳು ಎಂದು ಶಂತನು ಹೇಳಿದ್ದಾರೆ.

ಇನ್ನು ಶಾಂತನು ಪೋಸ್ಟ್‌ ಭಾರೀ ವೈರಲ್‌ ಆಗುತ್ತಿದ್ದು, ಒಂದೆರಡು ಗಂಟೆಗಳಲ್ಲಿ 27 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಪಡೆದುಕೊಂಡಿದೆ ಮತ್ತು ಅಲ್ಲದೇ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.”ಶಾಂತನು ಭಾಯ್, ಅವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ. ಸರ್ ಅವರ ಸ್ನೇಹಿತರನ್ನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ನಾವೆಲ್ಲರೂ ಅವರ ಚಿಂತನೆಗಳನ್ನು ಅನುಸರಿಸುತ್ತೇವೆ. ದೃಢವಾಗಿರಿ ಸಹೋದರ!,” ಒಬ್ಬ ಇನ್‌ಸ್ಟಾಗ್ರಾಂ ಬಳಕೆದಾರ ಬರೆದಿದ್ದಾರೆ.

“ನೀವು ಈಗ ಉತ್ತಮ ಭಾವನೆ ಹೊಂದಿದ್ದೀರಿ ಎಂದು ಭಾವಿಸುತ್ತೇವೆ! ನಗುತ್ತಲೇ ಇರಿ. ಅವರ ನಗು, ದಯೆ, ಬದ್ಧತೆ ನಿಮ್ಮೊಂದಿಗೆ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ,” ಕಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Noel Tata: ಟಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕವಾದ ನೋಯೆಲ್ ಟಾಟಾ ಯಾರು? ರತನ್‌ಗೂ ಅವರಿಗೂ ಏನು ಸಂಬಂಧ