Saturday, 14th December 2024

ರಾಮಾಯಣದ ರಾವಣನ ಪಾತ್ರಧಾರಿ ಅರವಿಂದ ತ್ರಿವೇದಿ ನಿಧನ

ನವದೆಹಲಿ: ಮಾಜಿ ಸಂಸದ, ನಟ, ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ರಾಮಾಯಣದಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದ ಅರವಿಂದ ತ್ರಿವೇದಿ(83) ಇಹಲೋಕ ತ್ಯಜಿಸಿದ್ದಾರೆ.

ಅರವಿಂದ ತ್ರಿವೇದಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ಸಹ ನಟ ಸುನೀಲ್ ಲಾಹ್ರಿ ಅವರು ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಅರವಿಂದ ತ್ರಿವೇದಿ ಅವರು ಇನ್ನು ಮುಂದೆ ನಮ್ಮೊಂದಿಗಿಲ್ಲ, ನನ್ನ ಮಾರ್ಗದರ್ಶಕ ಹಿತೈಷಿಯನ್ನು ನಾನು ಕಳೆದುಕೊಂಡಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸುನಿಲ್ ಲಾಹ್ರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅರವಿಂದ ತ್ರಿವೇದಿ ಮೃತಪಟ್ಟಿದ್ದಾರೆ.

ಗುಜರಾತಿ ಸಿನಿಮಾದ ಭೀಷ್ಮ ಎಂದೇ ಅರವಿಂದ ತ್ರಿವೇದಿ ಪ್ರಖ್ಯಾತರಾಗಿದ್ದರು. 1991ರಲ್ಲಿ ಸಬರ್ ಕಂಟಾ ಕ್ಷೇತ್ರದ ಬಿಜೆಪಿ ಸಂಸದ ರಾಗಿ ಆಯ್ಕೆಯಾಗಿದ್ದರು. ಹಿಂದಿ ಮತ್ತು ಗುಜರಾತಿಯ ಸಾಮಾಜಿಕ, ಪೌರಾಣಿಕ ಕಥೆಯಾಧಾರಿತ ಸುಮಾರು 300 ಸಿನಿಮಾಗಳಲ್ಲಿ ಅರವಿಂದ ತ್ರಿವೇದಿ ಅಭಿನಯಿಸಿದ್ದಾರೆ. ರಾಮಾಯಣ ಧಾರವಾಹಿಯ “ರಾವಣ” ಪಾತ್ರ ರಾಷ್ಟ್ರಮಟ್ಟದಲ್ಲಿ ಇವರನ್ನು ಗುರುತಿಸು ವಂತೆ ಮಾಡಿತ್ತು.

ಗುಜರಾತಿ ರಂಗಭೂಮಿಯಿಂದ ಆರಂಭವಾದ ಅವರ ವೃತ್ತಿಪರ ಬದುಕು ಸುಮಾರು 300 ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ಅಭಿನಯಿಸುವಂತೆ ಮಾಡಿತ್ತು. ಸುಮಾರು 40 ವರ್ಷಗಳ ಕಾಲ ಸಿನಿಮಾರಂಗಕ್ಕೆ ನೀಡಿದ ಇವರ ಕೊಡುಗೆ ಅಪಾರವಾಗಿದೆ.
ರಾಮಾಯಣದಲ್ಲಿ ರಾವಣನ ಪಾತ್ರ, ವಿಕ್ರಂ ಹಾಗೂ ಬೇತಾಳ ಎಂಬ ಧಾರವಾಹಿಯೂ ಇವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿತು.

ಅರವಿಂದ್ ತ್ರಿವೇದಿ ಅವರ ಅಂತಿಮ ದರ್ಶನದ ಬಳಿಕ ಮುಂಬೈನಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿ ದ್ದಾರೆ.