Friday, 13th December 2024

Ravneet Singh Bittu: ರಾಹುಲ್‌ ಗಾಂಧಿ ನಂ. 1 ಭಯೋತ್ಪಾದಕ ಎಂದ ಕೇಂದ್ರ ಸಚಿವರ ವಿರುದ್ಧ ಕಾಂಗ್ರೆಸ್‌ ದೂರು

Ravneet Singh Bittu

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರನ್ನು ದೇಶದ ನಂಬರ್ 1 ಭಯೋತ್ಪಾದಕ, ದೇಶದ ದೊಡ್ಡ ಶತ್ರು, ದೇಶದ ಏಜೆನ್ಸಿಗಳು ಅವರ ಮೇಲೆ ನಿಗಾ ಇಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu) ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ. ಅಲ್ಲದೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಿಸಿದೆ.

ಕಾಂಗ್ರೆಸ್‌ ನಾಯಕ ಅಜಯ್‌ ಮಾಕೇನ್‌ (Ajay Maken) ಅವರು ದಿಲ್ಲಿಯ ತುಘಲಕ್‌ ರಸ್ತೆಯ ಪೊಲೀಸ್‌ ಠಾಣೆಯಲ್ಲಿ ರವನೀತ್ ಸಿಂಗ್ ಬಿಟ್ಟು ವಿರುದ್ದ ದೂರು ನೀಡಿದ್ದಾರೆ. ದೂರಿನಲ್ಲಿ ಬಿಟ್ಟು ಅವರೊಂದಿಗೆ ಬಿಜೆಪಿ ನಾಯಕರಾದ ತರ್ವೀಂದರ್‌ ಸಿಂಗ್‌ ಮಾರ್ವ, ಶಿವಸೇನೆ ಶಾಸಕ ಸಂಜಯ್‌ ಗಾಯಕ್ವಾಡ್‌ ಮತ್ತು ಉತ್ತರ ಪ್ರದೇಶದ ಸಚಿವ ರಘುರಾಜ್‌ ಸಿಂಗ್‌ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ದೂರಿನ ಪ್ರತಿಯನ್ನು ಚುನಾವಣಾ ಆಯೋಗ (Election Commission of India)ಕ್ಕೂ ಸಲ್ಲಿಸಲಾಗಿದೆ.

ದೂರಿನಲ್ಲಿ ಏನಿದೆ?

“ಸಚಿವ ರವನೀತ್ ಸಿಂಗ್ ಬಿಟ್ಟು ಸೆಪ್ಟೆಂಬರ್‌ 15ರಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ‘ದೇಶದ ನಂಬರ್ ಒನ್ ಭಯೋತ್ಪಾದಕ’ ಎಂದು ಕರೆದಿದ್ದಾರೆ. ಬಿಟ್ಟು ಅವರು ಉದ್ದೇಶಪೂರ್ವಕವಾಗಿ ರಾಹುಲ್‌ ಗಾಂಧಿ ಅವರನ್ನು ಈ ರೀತಿ ಕರೆದಿದ್ದಾರೆ. ಸಾರ್ವಜನಿಕ ದ್ವೇಷ ಮತ್ತು ಆಕ್ರೋಶವನ್ನು ಪ್ರಚೋದಿಸಲು ಈ ಹೇಳಿಕೆ ನೀಡಿದ್ದಾರೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಅಮೆರಿಕ ಪ್ರವಾಸದ ವೇಳೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಿಖ್ ಸಮುದಾಯದ ಬಗ್ಗೆ ಮಾತನಾಡಿದ್ದರು. ರಾಹುಲ್ ಗಾಂಧಿಯ ಈ ಮಾತುಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಕೇಂದ್ರ ಸಚಿವ ರವನೀತ್ ಬಿಟ್ಟು ಈ ರೀತಿ ನಾಲಗೆ ಹರಿಬಿಟ್ಟಿದ್ದರು.

ʼʼಸೆಪ್ಟೆಂಬರ್ 11ರಂದು ಪಕ್ಷದ ಕಾರ್ಯಕ್ರಮವೊಂದರಲ್ಲಿ ಮತ್ತೊಬ್ಬ ಬಿಜೆಪಿ ನಾಯಕ ತರ್ವಿಂದರ್ ಸಿಂಗ್ ಮಾರ್ವ ಅವರು ರಾಹುಲ್ ಗಾಂಧಿ ವಿರುದ್ಧ ಸಾರ್ವಜನಿಕವಾಗಿ ಹತ್ಯೆ ಬೆದರಿಕೆ ಹಾಕಿದ್ದಾರೆ. ನೀವು (ರಾಹುಲ್‌ ಗಾಂಧಿ) ಸರಿಯಾಗಿ ವರ್ತಿಸುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಅಜ್ಜಿಗಾದಂತಯೇ ನಿಮಗಾಗುತ್ತದೆ ಎಂದಿದ್ದರುʼʼ ಎಂದು ಮಾಕೇನ್‌ ತಿಳಿಸಿದ್ದಾರೆ.

ʼʼಇನ್ನು ಸೆಪ್ಟೆಂಬರ್‌ 16ರಂದು ಶಿವಸೇನೆ ನಾಯಕ ಸಂಜಯ್‌ ಗಾಯಕ್ವಾಡ್‌ ಅವರು ರಾಹುಲ್‌ ಗಾಂಧಿಯ ನಾಲಗೆ ತುಂಡರಿಸಿದವರಿಗೆ 11 ಲಕ್ಷ ರೂ. ನಗದು ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ. ಜತೆಗೆ ಉತ್ತರ ಪ್ರದೇಶದ ಸಚಿವ ರಘುರಾಜ್‌ ಸಿಂಗ್‌ ಕೂಡ ರಾಹುಲ್‌ ಗಾಂಧಿಯನ್ನು ನಂ. 1 ಭಯೋತ್ಪಾದಕ ಎಂದು ಕರೆದಿದ್ದಾರೆʼʼ ಎಂದು ಮಾಕೇನ್‌ ತಿಳಿಸಿದ್ದಾರೆ. ಈ ನಾಯಕರ ವಿರುದ್ದ ಸೆಕ್ಷನ್‌ 351, 352, 353 ಮತ್ತು 61 ಪ್ರಕಾರ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ವೇಳೆ ಆಲ್‌ ಇಂಡಿಯಾ ಮಹಿಳಾ ಕಾಂಗ್ರೆಸ್‌ ಕಮಿಟಿ (AIMCC)ಯ ಮುಖ್ಯಸ್ಥೆ ಅಲ್ಕಾ ಲಂಬಾ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ: Kapil Sibal: ಕೋಲ್ಕತ್ತಾ ವೈದ್ಯೆ ಹತ್ಯೆ ವಿಚಾರಣೆಯ ನೇರ ಪ್ರಸಾರ ನಿಲ್ಲಿಸಿ; ಹಿರಿಯ ವಕೀಲ ಕಪಿಲ್ ಸಿಬಲ್ ಹೀಗೆ ಹೇಳಿದ್ದೇಕೆ?