Wednesday, 11th December 2024

Renewable Energy: ದೇಶದ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ

Renewable Energy

ನವದೆಹಲಿ: ಭಾರತದಲ್ಲಿ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ (ಸಣ್ಣ ಮತ್ತು ದೊಡ್ಡ ಜಲ ಮೂಲ, ಬಯೋಮಾಸ್‌, ಸಹ-ಉತ್ಪಾದನೆ ಮತ್ತು ತ್ಯಾಜ್ಯದಿಂದ ಶಕ್ತಿ) ಸೆಪ್ಟೆಂಬರ್‌ನಲ್ಲಿ 200 ಗಿಗಾ ವ್ಯಾಟ್ (GW) ಗಡಿ ದಾಟಿ 2,01,457.91 ಮೆಗಾ ವ್ಯಾಟ್ (MW) ತಲುಪಿದೆ (Renewable Energy). ಸೌರ (90,762 ಮೆಗಾ ವ್ಯಾಟ್) ಮತ್ತು ಪವನ (47,363 ಮೆಗಾವ್ಯಾಟ್) ಆಧಾರಿತ ವಿದ್ಯುತ ಇದರಲ್ಲಿ ಸಿಂಹಪಾಲು ಹೊಂದಿದೆ.

ರಾಜ್ಯಗಳ ಪಾಲು

ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ರಾಜ್ಯಗಳ ಪೈಕಿ ರಾಜಸ್ಥಾನ (31.5 ಗಿಗಾ ವ್ಯಾಟ್), ಗುಜರಾತ್ (28.3 ಗಿಗಾ ವ್ಯಾಟ್), ತಮಿಳುನಾಡು (23.7 ಗಿಗಾ ವ್ಯಾಟ್) ಮತ್ತು ಕರ್ನಾಟಕ (22.3 ಗಿಗಾ ವ್ಯಾಟ್) ಮೊದಲ ನಾಲ್ಕು ಸ್ಥಾನಗಳನ್ನು ಹೊಂದಿವೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ (Central Electricity Authority)ದ ಅಂಕಿ ಅಂಶಗಳು ತಿಳಿಸಿವೆ.

ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ 50 ವರ್ಷ

ಕೇಂದ್ರ ವಿದ್ಯುತ್ ಪ್ರಾಧಿಕಾರ 50ನೇ ವರ್ಷಕ್ಕೆ ಕಾಲಿಟ್ಟಿದೆ. ತಾಂತ್ರಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿರುವ ಈ ಸಂಸ್ಥೆ, ‘2047ರ ವೇಳೆಗೆ ಭಾರತೀಯ ವಿದ್ಯುತ್ ಕ್ಷೇತ್ರದ ಸನ್ನಿವೇಶದ ಬಗ್ಗೆ ಚಿಂತನ-ಮಂಥನ ಅಧಿವೇಶನ’ ನಡೆಸುವ ಮೂಲಕ ತನ್ನ ಸುವರ್ಣ ಮಹೋತ್ಸವ ಆಚರಣೆಯನ್ನು ಪ್ರಾರಂಭಿಸಲು ಮುಂದಾಗಿದೆ. ಇಂಧನ ಪರಿವರ್ತನೆಗೆ ಹಣಕಾಸು ನೆರವು ಒದಗಿಸುವುದು, 2047ರ ವೇಳೆಗೆ ಆಧುನಿಕ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಪೂರಕವಾದ ಪ್ರಸರಣ ವ್ಯವಸ್ಥೆಯನ್ನು ನಿರ್ಮಿಸುವುದು, ನವೀಕರಿಸಬಹುದಾದ ಇಂಧನಕ್ಕಾಗಿ ಸಾಮರ್ಥ್ಯ ಯೋಜನೆ ಮತ್ತು ನಿಯಂತ್ರಕ ಚೌಕಟ್ಟು, ಜಲವಿದ್ಯುತ್ ಹೆಚ್ಚಿಸುವುದು ಮತ್ತು 2047ರ ವೇಳೆಗೆ ಪಿಎಸ್‌ಪಿ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಇತ್ಯಾದಿ ಬಗ್ಗೆ ಅಧಿವೇಶನ ಚರ್ಚೆ ನಡೆಸಲಿದೆ.

2024ರ ಅಂತ್ಯದ ವೇಳೆಗೆ ವಿಶ್ವವು 1,100 ಗಿಗಾ ವ್ಯಾಟ್ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರಲಿದೆ (ಭಾರತದಲ್ಲಿ 67 ಗಿಗಾ ವ್ಯಾಟ್ ಮತ್ತು 48 ಗಿಗಾ ವ್ಯಾಟ್ ನಿರ್ಮಾಣ ಹಂತದಲ್ಲಿದೆ).

ಮೂರು ಪಟ್ಟು ಹೆಚ್ಚಿಸುವ ಗುರಿ ಸಾಧನೆ ಕಷ್ಟ

ಜಾಗತಿಕವಾಗಿ ನವೀಕರಿಸಬಹುದಾದ ಇಂಧನ ಯೋಜನೆಗಳು ಹೆಚ್ಚುತ್ತಿವೆ. ಆದರೆ 2022ರಿಂದ 2030ರ ವೇಳೆಗೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಗುರಿ ಸಾಧಿಸುವ ಸಾಧ್ಯತೆ ಇಲ್ಲ ಎಂದು ಅಂಕಿ-ಅಂಶ ತಿಳಿಸಿದೆ. 2030ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 11,000 ಗಿಗಾ ವ್ಯಾಟ್‌ಗೆ ಏರಿಸುವ ಗುರಿ ಹೊಂದಲಾಗಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ 9,760 ಗಿಗಾ ವ್ಯಾಟ್‌ಗೆ ತಲುಪುವ ಸಾಧ್ಯತೆ ಇದೆ. ಅಂದರೆ 3 ಪಟ್ಟು ಬದಲು 2.7 ಪಟ್ಟು ಹೆಚ್ಚಾಗಲಿದೆ.

ಸವಾಲು

ಅದಾಗ್ಯೂ ಈ ಗುರಿ ಸಾಧಿಸಲು ಸವಾಲೊಂದು ಎದುರಾಗಿದೆ. ಅದುವೇ ಗ್ರಿಡ್‌ನಲ್ಲಿ ಕಂಡು ಬಂದ ಸಮಸ್ಯೆ. ಅಂದರೆ ಗ್ರಿಡ್‌ನಲ್ಲಿನ ಹೂಡಿಕೆಗಳು ಅಗತ್ಯಕ್ಕೆ ಅನುಗುಣವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: 6G Race: 6ಜಿ ರೇಸ್‌ನಲ್ಲಿ ಭಾರತಕ್ಕೆ ಮುನ್ನಡೆ; ಜಾಗತಿಕ ಪೇಟೆಂಟ್ ಫೈಲಿಂಗ್‌ನಲ್ಲಿ 6ನೇ ರ‍್ಯಾಂಕ್‌