Wednesday, 11th December 2024

ಮೀಸಲಾತಿ ರದ್ದು: ನಿತೀಶ್‌ ಕುಮಾರ್‌ ಸರ್ಕಾರಕ್ಕೆ ಹಿನ್ನಡೆ

ಪಾಟ್ನಾ: ಕಳೆದ ವರ್ಷ ಮೀಸಲಾತಿ ಪ್ರಮಾಣವನ್ನು ಶೇ. 50ರಿಂದ ಶೇ. 65ಕ್ಕೆ ಹೆಚ್ಚಿಸಿದ್ದ ಬಿಹಾರ ಸರ್ಕಾರದ ಆದೇಶವನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಸರ್ಕಾರಕ್ಕೆ ಹಿನ್ನಡೆಯಾಗಿದೆ.

ರಾಜ್ಯವ್ಯಾಪಿ ಜಾತಿ ಸಮೀಕ್ಷೆ ನಡೆಸಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣವನ್ನು ಕಳೆದ ವರ್ಷ ಹೆಚ್ಚಿಸಲಾಗಿತ್ತು. ರಾಜ್ಯ ಸರ್ಕಾರದ ಈ ಕ್ರಮವು ಸುಪ್ರೀಂ ಕೋರ್ಟ್ ಆದೇಶಿಸಿದ ಮೀಸಲಾತಿಯ ಶೇ. 50 ರ ಮಿತಿಯನ್ನು ಮೀರಿದೆ. ಹೀಗಾಗಿ ಪಾಟ್ನಾ ಹೈಕೋರ್ಟ್‌ ಇದನ್ನು ಸಂವಿಧಾನ ಬಾಹಿರ ಎಂದು ಕರೆದಿದೆ.

2023ರ ನವೆಂಬರ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವ ಸರ್ಕಾರ ಜಾರಿಗೆ ತಂದ ಕಾನೂನನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಕೆಲವು ದಿನಗಳ ನಂತರ, ನಿತೀಶ್ ಕುಮಾರ್ ಸರ್ಕಾರವು ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಮಿತಿಯನ್ನು ಶೇ. 50ರಿಂದ ಶೇ. 65 ಕ್ಕ ಹೆಚ್ಚಿಸಲು ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸಿತ್ತು.