Monday, 9th December 2024

ಭೂ ಹಗರಣ: ಆರ್‌ಜೆಡಿ ಮುಖ್ಯಸ್ಥ ಲಾಲೂ ಸೇರಿ ಮೂವರಿಗೆ ಜಾಮೀನು

ವದೆಹಲಿ: ರೈಲ್ವೆ ಇಲಾಖೆಯ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಅವರ ಪತ್ನಿ ರಾಬಡಿ ದೇವಿ ಹಾಗೂ ಪುತ್ರ, ಬಿಹಾರದ ಉಪಮುಖ್ಯ ಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.

ಸಮನ್ಸ್‌ ಜಾರಿಯಾದ ಬೆನ್ನಲ್ಲೇ ಈ ಮೂವರು ಜಾಮೀನು ಮಂಜೂರು ಮಾಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಜಾಮೀನು ಮಂಜೂರು ಮಾಡಿದರು.

ತನಿಖೆ ಹಂತದಲ್ಲಿ ಆರೋಪಿಗಳ ಬಂಧನವಾಗಿಲ್ಲ ಎಂದು ಹೇಳಿದ ನ್ಯಾಯಾಲಯ, ತಲಾ ₹ 50 ಸಾವಿರ ಬಾಂಡ್‌ ನೀಡುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಪ್ರಾಥಮಿಕ ವರದಿಯಲ್ಲಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಯಂತ ಆರೋಪಗಳ ಇದ್ದವು. ಇದನ್ನು ಆಧರಿಸಿ ಸೆ. 22ರಂದು ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿತ್ತು.

ಉದ್ಯೋಗಕ್ಕಾಗಿ ಭೂಮಿ ಹಾಗೂ ಮೇವು ಹಗರಣ ಎರಡರಲ್ಲೂ ಲಾಲೂ ಪ್ರಸಾದ್ ಅವರು ಸದ್ಯ ಜಾಮೀನು ಪಡೆದಿದ್ದಾರೆ. ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ 2ನೇ ಆರೋಪ ಪಟ್ಟಿಯಲ್ಲಿ ತೇಜಸ್ವಿ ಯಾದವ್ ಅವರ ಹೆಸರನ್ನು ಸೇರಿಸಲಾಗಿದೆ.