Monday, 14th October 2024

Road Accident: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರ ಪುತ್ರನ ಅವಾಂತರ! ಹತ್ತಾರು ವಾಹನಗಳಿಗೆ ಆಡಿ ಕಾರು ಗುದ್ದಿಸಿ ಪರಾರಿ

maharashtra road accident

ನಾಗ್ಪುರ: ಮಹಾರಾಷ್ಟ್ರ ಬಿಜೆಪಿ (Maharashtra BJP leader) ಮುಖ್ಯಸ್ಥರ ಪುತ್ರ ಸಂಕೇತ್ ಬವಾಂಕುಲೆ ನಿನ್ನೆ ರಾತ್ರಿ ನಾಗ್ಪುರದಲ್ಲಿ ಹಲವಾರು ವಾಹನಗಳಿಗೆ ತನ್ನ ಆಡಿ ಕಾರನ್ನು ಡಿಕ್ಕಿ ಹೊಡೆಸಿ (Road Accident) ನಂತರ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಮಹಾರಾಷ್ಟ್ರ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರ ಪುತ್ರ ಸಂಕೇತ್ ಬವಾಂಕುಲೆ, ಸೋಮವಾರ ನಾಗ್ಪುರದಲ್ಲಿ ರಸ್ತೆ ಅಪಘಾತಕ್ಕೆ ಕಾರಣನಾಗಿದ್ದಾನೆ. ಈತನ ಮಾಲೀಕತ್ವದ ಆಡಿ ಕಾರು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ನಾಗ್ಪುರದ ರಾಮದಾಸ್‌ಪೇತ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಸಂಕೇತ್ ಬವಾಂಕುಲೆ ಸೇರಿದಂತೆ ಐವರು ಮಿತ್ರರು ಧರಂಪೇತ್‌ನಲ್ಲಿರುವ ಬಿಯರ್ ಬಾರ್‌ನಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಐವರೂ ಪಾನಮತ್ತರಾಗಿದ್ದರು ಎಂದು ಹೇಳಲಾಗಿದೆ. ಕಾರಿನಲ್ಲಿದ್ದ ಇಬ್ಬರಲ್ಲಿ ಒಬ್ಬ ಚಾಲಕ ಅರ್ಜುನ್ ಹಾವ್ರೆ, ಮತ್ತೊಬ್ಬ ರೋನಿತ್ ಚಿತ್ತಂವಾರ್ ಎಂದು ಗುರುತಿಸಲಾಗಿದೆ. ಸಂಕೇತ್ ಮತ್ತು ಇತರ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

ಅರ್ಜುನ್ ಹಾವ್ರೆ ಮತ್ತು ರೋನಿತ್ ಚಿತ್ತಮ್ವಾರ್ ಅವರನ್ನು ಮೊದಲು ತಹಸಿಲ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಮತ್ತು ನಂತರ ಹೆಚ್ಚಿನ ತನಿಖೆಗಾಗಿ ಸೀತಾಬುಲ್ಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಅವರ ವೈದ್ಯಕೀಯ ಪರೀಕ್ಷೆಗಳು ಇನ್ನೂ ನಡೆಯುತ್ತಿವೆ.

ಸಿತಾಬುಲ್ಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದಂತೆ, ಸೋನ್‌ ಕಾಂಬಳೆ ಎಂಬವರ ದೂರಿನ ಮೇರೆಗೆ ಅಜಾಗರೂಕ ಚಾಲನೆ ಮತ್ತು ಇತರ ಅಪರಾಧಗಳ ಪ್ರಕರಣವನ್ನು ದಾಖಲಿಸಲಾಗಿದೆ. ಮಾಂಕಾಪುರ ಸೇತುವೆಯಲ್ಲಿ ಘಟನೆ ನಡೆದಿದೆ. ಸ್ಥಳದಿಂದ ಪರಾರಿಯಾಗಿರುವ ಸಂಕೇತ್ ಬಾವಂಕುಲೆ ಮತ್ತು ಇತರ ಇಬ್ಬರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಚಾಲಕ ಹಾಗೂ ಮತ್ತೊಬ್ಬನ ವೈದ್ಯಕೀಯ ಪರೀಕ್ಷೆ, ರಕ್ತ ಪರೀಕ್ಷೆ ನಡೆದಿದೆ. ಅಪಘಾತದ ಸಮಯದಲ್ಲಿ ಅರ್ಜುನ್ ಹಾವ್ರೆ ಮತ್ತು ರೋನಿತ್ ಚಿತ್ತಮ್ವಾರ್ ಇಬ್ಬರೂ ಕುಡಿದಿದ್ದರು ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ಸೋಮವಾರ ನಸುಕಿನ 1 ಗಂಟೆ ವೇಳೆಗೆ ಪ್ರಕರಣದ ದೂರುದಾರ ಜಿತೇಂದ್ರ ಸೋನಕಾಂಬಳೆ ಅವರ ಕಾರಿಗೆ ಆಡಿ ಮೊದಲು ಡಿಕ್ಕಿ ಹೊಡೆದಿದೆ. ನಂತರ ಮೊಪೆಡ್‌ಗೆ ಡಿಕ್ಕಿ ಹೊಡೆದಿದ್ದು, ಸವಾರರಿಬ್ಬರು ಗಾಯಗೊಂಡಿದ್ದಾರೆ. ನಂತರ ಪೋಲೋ ಕಾರು ಸೇರಿದಂತೆ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಪೋಲೋ ಚಾಲಕ ಕಾರನ್ನು ಹಿಂಬಾಲಿಸಿ ಮಾಂಕಾಪುರ ಸೇತುವೆ ಬಳಿ ನಿಲ್ಲಿಸಿದ್ದಾನೆ. ಪೋಲೋ ಕಾರಿನಲ್ಲಿದ್ದವರು ಅರ್ಜುನ್ ಹಾವ್ರೆ ಮತ್ತು ರೋನಿತ್ ಚಿತ್ತಮ್ವಾರ್ ಅವರನ್ನು ಪರಾರಿಯಾಗದಂತೆ ತಡೆದರು. ಅರ್ಜುನ್ ಹಾವ್ರೆಯನ್ನು ಬಂಧಿಸಲಾಗಿದೆ.

“ಘಟನೆಗಳ ಸರಣಿಯನ್ನು ಖಚಿತಪಡಿಸಿಕೊಳ್ಳಲು ನಾವು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಅದರ ನಂತರ ಘಟನೆಯಲ್ಲಿದ್ದ ಇತರರು ಸೇರಿದಂತೆ ಎಲ್ಲರ ಮೇಲೆ ಮುಂದಿನ ಕ್ರಮವನ್ನು ಅನುಸರಿಸಲಾಗುವುದು” ಎಂದು ಪೊಲೀಸರು ಹೇಳಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ ಅವರು ತಮ್ಮ ಪುತ್ರ ಸಂಕೇತ್ ಹೆಸರಿನಲ್ಲಿ ಆಡಿ ಕಾರು ನೋಂದಣಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. “ಪೊಲೀಸರು ಯಾವುದೇ ಪಕ್ಷಪಾತವಿಲ್ಲದೆ ಅಪಘಾತದ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ನಾನು ಯಾವುದೇ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿಲ್ಲ. ಕಾನೂನು ಎಲ್ಲರಿಗೂ ಸಮಾನ” ಎಂದಿದ್ದಾರೆ.

ಈ ಸುದ್ದಿ ಓದಿ: Rashmika Mandanna : ಅಪಘಾತದಲ್ಲಿ ಗಾಯಗೊಂಡಿದ್ದಾರೆ ರಶ್ಮಿಕಾ ಮಂದಣ್ಣ; ಏನಾಯಿತು ಎಂದು ವಿವರಿಸಿದ ನಟಿ