Monday, 16th September 2024

Stock Market: ಷೇರುಪೇಟೆಯಲ್ಲಿ ತಲ್ಲಣ; ಹೂಡಿಕೆದಾರರಿಗೆ 3 ಲಕ್ಷ ಕೋಟಿ ರೂ. ನಷ್ಟ

Stock Market

ಮುಂಬೈ:  ಅಮೆರಿಕದಲ್ಲಿನ ದುರ್ಬಲ ಉತ್ಪಾದನಾ ದತ್ತಾಂಶ (Weak manufacturing data)ವು  ಆರ್ಥಿಕ ಹಿಂಜರಿತದ ಭೀತಿಯನ್ನು ಸೂಚಿಸಿದ್ದು, ಅದರ ಪರಿಣಾಮ ಭಾರತದ ಷೇರುಪೇಟೆಯ ಮೇಲೂ ಬೀರಿದೆ (Stock Market).  ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ (BSE Sensex) ಮತ್ತು ನಿಫ್ಟಿ 50 (Nifty 50)ಬುಧವಾರ ಗಮನಾರ್ಹವಾಗಿ ಕುಸಿತ ಕಂಡಿವೆ. ವಹಿವಾಟಿನ ಆರಂಭದಲ್ಲೇ ಬಿಎಸ್ಇ ಸೆನ್ಸೆಕ್ಸ್ 710 ಪಾಯಿಂಟ್ಸ್ ಅಥವಾ ಶೇಕಡಾ 0.86ರಷ್ಟು ಕುಸಿದು 81,845ಕ್ಕೆ ತಲುಪಿದರೆ, ನಿಫ್ಟಿ 50 175 ಪಾಯಿಂಟ್ಸ್ ಅಥವಾ ಶೇಕಡಾ 0.69ರಷ್ಟು ಕುಸಿದು 25,104ಕ್ಕೆ ತಲುಪಿದೆ. ಈ ಮೂಲಕ ಹೂಡಿಕೆದಾರರಿಗೆ 3 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ಹೂಡಿಕೆದಾರರ ಸಂಪತ್ತು 465.54 ಲಕ್ಷ ಕೋಟಿ ರೂ.ಗಳಿಂದ 462.44 ಲಕ್ಷ ಕೋಟಿ ರೂ.ಗೆ ಇಳಿದಿದೆ.

ಜೆಎಸ್‌ಡಬ್ಲ್ಯು ಸ್ಟೀಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್ ಮತ್ತು ಎನ್‌ಟಿಪಿಸಿ ಷೇರುಗಳು ಶೇಕಡಾ 1.77ರಷ್ಟು ಕುಸಿದವು. ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ 28 ಷೇರುಗಳು ನಷ್ಟದಲ್ಲಿ ವಹಿವಾಟು ನಡೆಸುತ್ತಿವೆ. ನಿಫ್ಟಿಯ 46 ಷೇರುಗಳೂ ಕುಸಿತ ದಾಖಲಿವೆ. ಒಎನ್‌ಜಿಸಿ, ಹಿಂಡಾಲ್ಕೊ, ವಿಪ್ರೋ, ಎಲ್‌ಟಿಐಮೈಂಡ್‌ಟ್ರೀ ಮತ್ತು ಜೆಎಸ್‌ಡಬ್ಯು ಸ್ಟೀಲ್ ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಗಳು. ಇವು ಆರಂಭಿಕ ವ್ಯವಹಾರಗಳಲ್ಲಿ ಶೇ. 2.79ರಷ್ಟು ಕುಸಿತ ಕಂಡಿವೆ.

https://x.com/SharedotMarket/status/1831178098764579278

ಕನಿಷ್ಠ ಮತ್ತು ಗರಿಷ್ಠ

ಬಿಎಸ್ಇಯಲ್ಲಿ 87 ಷೇರುಗಳು ಇಂದು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ಮತ್ತೊಂದೆಡೆ 19 ಷೇರುಗಳು ಬುಧವಾರದ ಆರಂಭಿಕ ವ್ಯವಹಾರಗಳಲ್ಲಿ 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿವು. 3,008 ಷೇರುಗಳ ಪೈಕಿ 1,288 ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಸುಮಾರು 1,597 ಷೇರುಗಳು ಕೆಂಪು ಬಣ್ಣದಲ್ಲಿ ವ್ಯವಹಾರ ಆರಂಭಿಸಿವೆ. ಇನ್ನು 123 ಷೇರುಗಳು ಬದಲಾಗದೆ ಉಳಿದಿವೆ. ಬೆಳಿಗ್ಗೆ ಷೇರು ಮಾರುಕಟ್ಟೆ ಕುಸಿದಿದ್ದರಿಂದ ಸುಮಾರು 70 ಷೇರುಗಳು ತಮ್ಮ ಲೋವರ್ ಸರ್ಕ್ಯೂಟ್ ಮಿತಿಗಳನ್ನು ತಲುಪಿದವು. ಇದನ್ನು ಮಾರುಕಟ್ಟೆಯಲ್ಲಿನ ದುರ್ಬಲ ಸ್ಥಿತಿಯ ಪ್ರತಿಫಲನ ಎಂದೇ ಪರಿಗಣಿಸಲಾಗುತ್ತದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ ನಿವ್ವಳ ಆಧಾರದ ಮೇಲೆ 1,735 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದರೆ, ದೇಶೀಯ ಹೂಡಿಕೆದಾರರು 356.37 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದರು ಎಂದು ಅಂಕಿ ಅಂಶಗಳು ತಿಳಿಸಿವೆ.

ಮಂಗಳವಾರ ಏನಾಗಿತ್ತು?

ಮಂಗಳವಾರದ ವ್ಯವಹಾರದಲ್ಲಿ ಸೆನ್ಸೆಕ್ಸ್ 4.40 ಪಾಯಿಂಟ್ ಕುಸಿದು 82,555 ಕ್ಕೆ ತಲುಪಿದ್ದರೆ ನಿಫ್ಟಿ 1.15 ಪಾಯಿಂಟ್ ಏರಿಕೆ ಕಂಡು 25,279.80ಕ್ಕೆ ಮುಟ್ಟಿತ್ತು.

ಏಷ್ಯಾದ ಮಾರುಕಟ್ಟೆ

ಇಂದು ಜಪಾನ್‌ನ ನಿಕೈ ಷೇರುಪೇಟೆ ಸೂಚ್ಯಂಕ 1,350 ಪಾಯಿಂಟ್ ಕುಸಿತ ಕಂಡು 37,335 ಅಂಕಗಳಿಗೆ ತಲುಪಿದರೆ, ಹಾಂಗ್‌ ಕಾಂಗ್‌ನ ಹಾಂಗ್ ಸೆಂಗ್ ಸೂಚ್ಯಂಕ 186 ಪಾಯಿಂಟ್ ಕುಸಿತ ಕಂಡು 17,464 ಅಂಕಗಳಿಗೆ ತಲುಪಿದೆ. ತೈವಾನ್ ವೇಯ್ಟೆಡ್ ಸೂಚ್ಯಂಕವು 869 ಪಾಯಿಂಟ್ ಕುಸಿದು 21,223 ಪಾಯಿಂಟ್‌ ದಾಖಲಿಸಿದರೆ, ಕೋರಿಯಾದ ಕೋಸ್ಪಿ 74 ಪಾಯಿಂಟ್ ಕುಸಿದು 2,590ಕ್ಕೆ ತಲುಪಿದೆ.

ಯುರೋಪ್‌ ಮಾರುಕಟ್ಟೆ

ಮಂಗಳವಾರ ಇಂಗ್ಲೆಂಡ್‌ನ ಎಫ್‌ಟಿಎಸ್‌ಇ 65 ಪಾಯಿಂಟ್‌ ಕುಸಿತ ಕಂಡು 8,298 ದಾಖಲಿಸಿದೆ. ಫ್ರಾನ್ಸ್‌ನ ಸಿಎಸಿ 71 ಪಾಯಿಂಟ್‌ ಕಡಿಮೆಯಾಗಿ 7,575 ಅಂಕ ದಾಖಲಿಸಿದೆ. ಜರ್ಮನಿಯ ಡಿಎಎಕ್ಸ್‌ 18,747 ಪಾಯಿಂಟ್‌ಗೆ ತಲುಪುವ ಮುನ್ನ 184 ಅಂಕ ಕಳೆದುಕೊಂಡಿತ್ತು.

ಸಾಮಾನ್ಯವಾಗಿ ಸೆಪ್ಟೆಂಬರ್ ಅನ್ನು ಜಾಗತಿಕ ಮಾರುಕಟ್ಟೆಗಳಿಗೆ ದುರ್ಬಲ ತಿಂಗಳು ಎಂದೇ ಪರಿಗಣಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಇದು ನಿಜವಾಗಿದೆ. ಆರಂಭಿಕ ಪ್ರವೃತ್ತಿಗಳನ್ನು ಗಮನಿಸಿದರೆ, ಇದು ಈ ವರ್ಷವೂ ನಿಜವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: GST Council Meeting: ಮುಂದಿನ ವಾರ 54ನೇ ಜಿಎಸ್‌ಟಿ ಕೌನ್ಸಿಲ್‌ ಸಭೆ-ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ?

Leave a Reply

Your email address will not be published. Required fields are marked *