Saturday, 23rd November 2024

ಭಾರತೀಯ ರೂಪಾಯಿ 77.73ಕ್ಕೆ ಕುಸಿತ

ನವದೆಹಲಿ: ಯುಎಸ್ ಡಾಲರ್ ಎದುರು ಮಂಗಳವಾರ ಭಾರತೀಯ ರೂಪಾಯಿ 77.73 ಕ್ಕೆ ದಾಖಲೆಯ ಕುಸಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು 18 ಪೈಸೆ ಕುಸಿತವಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 242 ಪಾಯಿಂಟ್‌ಗಳ ಏರಿಕೆಯೊಂದಿಗೆ 53,216ರಲ್ಲಿ ವಹಿವಾಟು ಆರಂಭ ಮಾಡಿದರೆ, ನಿಫ್ಟಿ 70 ಪಾಯಿಂಟ್‌ಗಳ ಜಿಗಿದು 15,912 ಕ್ಕೆ ಸ್ಥಿರವಾಗಿದೆ. ಆರಂಭಿಕ ವಹಿವಾಟಿನಲ್ಲಿ ಒಂದು ಡಾಲರ್‌ಗೆ 77.73ರಂತೆ ವಿನಿಮಯ ನಡೆದಿದೆ. ಈ ನಡುವೆ ರೂಪಾಯಿ ಮೌಲ್ಯ ಇಳಿಕೆಗೆ ಪ್ರಮುಖವಾಗಿ ಅಮೆರಿಕದ ಡಾಲರ್ ಬಲಗೊಳ್ಳುತ್ತಿರುವುದು ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ.

ಇನ್ನು ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳ ಹೊರ ಹೋಗುತ್ತಿರುವುದು ಕೂಡಾ ರೂಪಾಯಿ ಮೌಲ್ಯ ಕುಸಿತಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಭಾರತದ ರೂಪಾಯಿ ಮೌಲ್ಯದ ಕುಸಿತ ಹೀಗೆಯೇ ಮುಂದುವರಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಬ್ಯಾಂಕ್) ಮಧ್ಯ ಪ್ರವೇಶ ಮಾಡುವ ನಿರೀಕ್ಷೆ ಇದೆ.

ಮೇ 9ರಂದು ಯುಎಸ್‌ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ 77.42 ಕ್ಕೆ ಕುಸಿದಿದೆ.