Wednesday, 11th December 2024

S Jaishankar: ಕಿಮ್‌ ಜಾಂಗ್‌ ಉನ್‌ ಅಥವಾ ಜಾರ್ಜ್‌ ಸೋರೋಸ್-‌ ಯಾರ ಜೊತೆಗೆ ಡಿನ್ನರ್?‌ ಜೈಶಂಕರ್‌ ಉತ್ತರಕ್ಕೆ ಜನ ಫಿದಾ!

s jaishankar

ನವದೆಹಲಿ: ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S jaishankar) , ಸಾರ್ವಜನಿಕ ವೇದಿಕೆಗಳಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಚುರುಕಾದ ಪಂಚಿಂಗ್‌ ಹಾಗೂ ವಿನೋದಮಯ ಉತ್ತರಗಳನ್ನು ನೀಡುವುದರಲ್ಲಿ ಸಿದ್ಧಹಸ್ತರು. ಅಂಥದೇ ಒಂದು ಇಕ್ಕಟ್ಟಿನ ಪ್ರಶ್ನೆಗೆ ಅವರು ಇಂದು ಉತ್ತರಿಸಿದ ರೀತಿ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ (Viral video) ಆಗಿದೆ. ಇದನ್ನು ನೋಡಿದ ಜನ ಜೈಶಂಕರ್‌ ಜಾಣ್ಮೆಗೆ ತಲೆದೂಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ರ್ಯಾಪಿಡ್ ಫೈರ್ ಪ್ರಶ್ನೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಈ ಹಾಸ್ಯಮಯ ಉತ್ತರ ನೀಡಿದರು. ಸಂದರ್ಶಕರು ಕೇಳಿದ ಪ್ರಶ್ನೆ ಹೀಗಿತ್ತು: “ಇಬ್ಬರಲ್ಲಿ ಒಬ್ಬರ ಜೊತೆಗೆ ಡಿನ್ನರ್ ಮಾಡಲು ನೀವು ನಿರ್ಧರಿಸಿದರೆ ಯಾರನ್ನು ಆಯ್ಕೆ ಮಾಡುತ್ತೀರಿ- ಕಿಮ್ ಜಾಂಗ್ ಉನ್ (Kim Jong Un) ಅಥವಾ ಜಾರ್ಜ್ ಸೊರೊಸ್ (George Soros)?”

ಎಸ್‌ ಜೈಶಂಕರ್‌ ಕ್ಷಣಾರ್ಧದಲ್ಲಿ ಉತ್ತರಿಸಿದರು: “ಈಗ ನವರಾತ್ರಿ. ನಾನು ಉಪವಾಸ ಆಚರಿಸುತ್ತಿದ್ದೇನೆ” ಜೈಶಂಕರ್‌ ಉತ್ತರದಿಂದ ಚಕಿತರಾದ ಕೇಳುಗರು ಮನಸಾರೆ ನಕ್ಕರು. ಸಂದರ್ಶಕರು ಕೂಡ ನಕ್ಕು, “ನಲುವತ್ತು ವರ್ಷಗಳ ಡಿಪ್ಲೊಮಸಿ ನಿಮ್ಮ ನಾಲಿಗೆ ತುದಿಯಲ್ಲೇ ಇದೆ” ಎಂದರು.

ಜೈಶಂಕರ್‌ ಅವರ ಈ ಉತ್ತರಕ್ಕೆ ಕಾರಣವಿಲ್ಲದಿಲ್ಲ. ಕಿಮ್‌ ಜಾಂಗ್‌ ಉನ್‌ ಅವರ ಉತ್ತರ ಕೊರಿಯಾದ ಜೊತೆಗೆ ಭಾರತಕ್ಕೆ ಯಾವುದೇ ಉತ್ತಮ ಸಂಬಂಧವಲ್ಲ. ಹಾಗೆಯೇ ಹಂಗೇರಿಯನ್-‌ ಅಮೆರಿಕನ್‌ ಉದ್ಯಮಿ ಜಾರ್ಜ್ ಸೊರೊಸ್ ಕೂಡ ಭಾರತದಲ್ಲಿ ವಿವಾದಾತ್ಮಕ ವ್ಯಕ್ತಿ. ಪ್ರಧಾನಿ ಮೋದಿ ಅವರ ಟೀಕಾಕಾರರು. ಭಾರತ-ವಿರೋಧಿ ಶಕ್ತಿಗಳಿಗೆ ಇವರು ಧನಸಹಾಯ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ವಿದೇಶಾಂಗ ಸಚಿವರು ವಿಶ್ವ ವೇದಿಕೆಯಲ್ಲಿ ಕಷ್ಟಕರವಾದ ಪ್ರಶ್ನೆಗಳಿಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ನೀಡುವುದಕ್ಕೆ ಪ್ರಸಿದ್ಧ. ಉಕ್ರೇನ್‌ನಲ್ಲಿನ ಯುದ್ಧದ ನಡುವೆ ಭಾರತವು ರಷ್ಯಾದಿಂದ ತೈಲವನ್ನು ಏಕೆ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿತು ಎಂಬ ಪ್ರಶ್ನೆಗೆ ಅವರ ಉತ್ತರ ಕೂಡ ಅವರ ಟೀಕಾಕಾರರನ್ನು ಮೌನವಾಗಿಸಿತ್ತು

“ನೀವು ತೈಲ ಖರೀದಿಗಳನ್ನು ಉಲ್ಲೇಖಿಸಿದ್ದೀರಿ. ರಷ್ಯಾದಿಂದ ಇಂಧನ ಖರೀದಿಯನ್ನು ನೋಡಿದರೆ, ನಿಮ್ಮ ಗಮನವನ್ನು ಯುರೋಪ್ ಮೇಲೆ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ನಾವು ಸ್ವಲ್ಪ ಇಂಧನವನ್ನು ಖರೀದಿಸುತ್ತಿದ್ದೇವೆ ನಿಜ, ಅದು ನಮ್ಮ ಇಂಧನ ಭದ್ರತೆಗೆ ಅವಶ್ಯಕವಾಗಿದೆ. ಆದರೆ ಅಂಕಿಅಂಶಗಳನ್ನು ಗಮನಿಸಿ. ಬಹುಶಃ ನಮ್ಮ ಒಂದು ತಿಂಗಳ ಒಟ್ಟು ಖರೀದಿ, ಯುರೋಪ್ ರಷ್ಯದಿಂದ ಅರ್ಧ ದಿನದಲ್ಲಿ ಪಡೆಯುತ್ತಿರುವ ಇಂಧನದ ಪ್ರಮಾಣಕ್ಕಿಂತ ಕಡಿಮೆಯಿದೆ” ಎಂದು ಉತ್ತರಿಸಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದರು.

ಇದನ್ನೂ ಓದಿ: S Jaishankar: ಪಾಕ್‌ ಜತೆ ಯಾವುದೇ ದ್ವಿಪಕ್ಷೀಯ ಮಾತುಕತೆ ಇಲ್ಲ; ಸಚಿವ ಎಸ್‌. ಜೈಶಂಕರ್‌ ಸ್ಪಷ್ಟನೆ