Wednesday, 11th December 2024

S Jaishankar: ಪಾಕ್‌ ಜತೆ ಯಾವುದೇ ದ್ವಿಪಕ್ಷೀಯ ಮಾತುಕತೆ ಇಲ್ಲ; ಸಚಿವ ಎಸ್‌. ಜೈಶಂಕರ್‌ ಸ್ಪಷ್ಟನೆ

S Jaishankar

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ (S Jaishankar) ಅವರು ಅಕ್ಟೋಬರ್‌ ಮಧ್ಯ ಭಾಗದಲ್ಲಿ ಶಾಂಘೈ ಸಹಕಾರ ಸಂಘಟನೆಯ (Shanghai Cooperation Organisation) ಸಮಾವೇಶದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಭೆಯ ಸಾಧ್ಯತೆಯನ್ನು ಅವರು ಶನಿವಾರ (ಅಕ್ಟೋಬರ್‌ 5) ತಳ್ಳಿ ಹಾಕಿದ್ದಾರೆ. ಪಾಕ್‌ ಭೇಟಿ ವೇಳೆ ಆ ದೇಶದೊಂದಿಗೆ ಯಾವುದೇ ಅಧಿಕೃತ ಮಾತುಕತೆ ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಅಕ್ಟೋಬರ್ 15 ಮತ್ತು 16ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (SCO)ಯ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವಎಸ್‌. ಜೈಶಂಕರ್‌ ನಮ್ಮ ನಿಯೋಗವನ್ನು ಮುನ್ನಡೆಸುತ್ತಾರೆ” ಎಂದು ಸುದ್ದಿಗೋಷ್ಠಿಯಲ್ಲಿ ರಣಧೀರ್ ಜೈಸ್ವಾಲ್ ಶುಕ್ರವಾರ ಪ್ರಕಟಿಸಿದ್ದರು.

“ಈ ಭೇಟಿಯಲ್ಲಿ ಬಹುಪಕ್ಷೀಯ ಚರ್ಚೆ ನಡೆಯಲಿದೆ. ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚಿಸಲು ನಾನು ಅಲ್ಲಿಗೆ ಹೋಗುತ್ತಿಲ್ಲ. ಎಸ್‌ಸಿಒದ ಸದಸ್ಯನಾಗಿ ನಾನು ಅಲ್ಲಿಗೆ ಹೋಗುತ್ತಿದ್ದೇನೆ” ಎಂದು ಜೈಶಂಕರ್ ಹೇಳಿದ್ದಾರೆ. ಇದೇ ಅವರು ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (South Asian Association for Regional Cooperation-SAARC)ದ ಪ್ರಗತಿ ಸ್ಥಗಿತಗೊಂಡಿರುವುದಕ್ಕೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ʼʼಇತ್ತೀಚೆಗೆ ಸಾರ್ಕ್‌ನ ಚಟುವಟಿಕೆ ಸ್ಥಗಿತಗೊಂಡಿದೆ. ಸಾರ್ಕ್‌ನ ಸದಸ್ಯ ರಾಷ್ಟ್ರವೊಂದು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಡೆಸುತ್ತಿದೆ. ಇದೇ ಕಾರಣಕ್ಕೆ ಸಾರ್ಕ್‌ನ ಸಭೆ ನಡೆಸಲಾಗುತ್ತಿಲ್ಲʼʼ ಎಂದು ಅವರು ಭಾರತ ವಿರುದ್ದ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಯನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.

“ಭಯೋತ್ಪಾದನೆ ಸ್ವೀಕಾರಾರ್ಹವಲ್ಲದ ಚಟುವಟಿಕೆಯಾಗಿದ್ದು ನಮ್ಮ ನೆರೆಹೊರೆಯವರು ಅದನ್ನು ಮುಂದುವರಿಸಿದರೆ ಸಾರ್ಕ್‌ನಲ್ಲಿ ಎಂದಿನಂತೆ ವ್ಯವಹಾರ ನಡೆಯಲು ಸಾಧ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಾರ್ಕ್ ಸಭೆ ನಡೆಯದಿರಲು ಇದು ಪ್ರಮುಖ ಕಾರಣ. ಆದರೆ ಪ್ರಾದೇಶಿಕ ಚಟುವಟಿಕೆಗಳು ನಿಂತಿವೆ ಎಂಬುದು ಇದರ ಅರ್ಥವಲ್ಲ. ವಾಸ್ತವವಾಗಿ ಕಳೆದ ಐದರಿಂದ ಆರು ವರ್ಷಗಳಲ್ಲಿ ನಾವು ಭಾರತೀಯ ಉಪಖಂಡದಲ್ಲಿ ಹೆಚ್ಚು ಪ್ರಾದೇಶಿಕ ಏಕೀಕರಣವನ್ನು ನೋಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಐಸಿ ಸೆಂಟರ್ ಫಾರ್ ಗವರ್ನೆನ್ಸ್ ಆಯೋಜಿಸಿದ್ದಸರ್ದಾರ್ ಪಟೇಲ್‌ ಕುರಿತಾದ ಉಪನ್ಯಾಸದಲ್ಲಿ ಮಾತನಾಡಿದ ಜೈಶಂಕರ್, “ಜುನಾಗಢ ಮತ್ತು ಹೈದರಾಬಾದ್ ವಿಷಯದಲ್ಲಿ ಸರ್ದಾರ್ ಪಟೇಲ್ ಅವರು ವಿಶ್ವಸಂಸ್ಥೆಗೆ ಹೋಗುವುದನ್ನು ವಿರೋಧಿಸಿದ್ದರು. ಭಾರತವು ತನ್ನ ಸಮಸ್ಯೆಯನ್ನು ಇತರರ ಮುಂದೆ ಕೊಂಡೊಯ್ಯಬಾರದು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ದುರದೃಷ್ಟವಶಾತ್ ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಯಿತುʼʼ ಎಂದು ಹೇಳಿದ್ದಾರೆ.

ʼʼಇತರ ಯಾವುದೇ ನೆರೆಹೊರೆಯ ದೇಶದಂತೆ ಭಾರತವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತದೆ. ಆದರೆ ಪಾಕ್‌ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಯಂತ್ರಿಸುತ್ತಿಲ್ಲ. ಸರ್ದಾರ್ ಪಟೇಲ್ ಹೇಳಿದಂತೆ ವಾಸ್ತವಿಕತೆಯು ನಮ್ಮ ನೀತಿಯ ಅಡಿಪಾಯವಾಗಿರಬೇಕು” ಎಂದು ಜೈಶಂಕರ್‌ ಪ್ರತಿಪಾದಿಸಿದ್ದಾರೆ.

2019ರ ಫೆಬ್ರವರಿಯಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿನ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಜೈಶಂಕರ್ ಅವರನ್ನು ಶೃಂಗಸಭೆಗೆ ಪಾಕಿಸ್ತಾನಕ್ಕೆ ಕಳುಹಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370ನೇ ವಿಧಿಯನ್ನು ತೆಗೆದುಹಾಕುವ ಭಾರತದ ಕ್ರಮವನ್ನು ಪಾಕಿಸ್ತಾನ ತೀವ್ರವಾಗಿ ವಿರೋಧಿಸಿದ ನಂತರದ ಉಭಯ ದೇಶಗಳ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಎಸ್‌ಸಿಒ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗಸ್ಟ್‌ನಲ್ಲಿ ಪಾಕಿಸ್ತಾನ ಆಹ್ವಾನಿಸಿತ್ತು.

ಈ ಸುದ್ದಿಯನ್ನೂ ಓದಿ: S Jaishankar: ಪಾಕಿಸ್ತಾನದೊಂದಿಗೆ ಮಾತುಕತೆ ಮುಗಿದ ಅಧ್ಯಾಯ; ಸಚಿವ ಎಸ್‌. ಜೈಶಂಕರ್‌ ಸ್ಪಷ್ಟನೆ

9 ವರ್ಷಗಳ ಬಳಿಕ

ಸುಮಾರು 9 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ ಕೊನೆಯ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. 2015ರ ಡಿಸೆಂಬರ್‌ನಲ್ಲಿ ಅವರು ಅಫ್ಘಾನಿಸ್ತಾನ ಕುರಿತಾದ ಸಮಾಲೋಚನೆಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಿದ್ದರು.