Friday, 13th December 2024

Salman Khan : ಸಲ್ಮಾನ್ ಮನೆಗೆ ಗುಂಡಿನ ದಾಳಿ, ಆರೋಪಿ ವಿಕ್ಕಿ ಜಾಮೀನು ಅರ್ಜಿ ತಿರಸ್ಕೃತ

Salman Khan

ನವದೆಹಲಿ: ಈ ವರ್ಷದ ಏಪ್ರಿಲ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಬಾಂದ್ರಾ ನಿವಾಸದ ಹೊರಗೆ ನಡೆದ ಶೂಟೌಟ್ ಘಟನೆಯ ಪ್ರಮುಖ ಆರೋಪಿ ವಿಕ್ಕಿ ಗುಪ್ತಾಗೆ ವಿಶೇಷ ಎಂಸಿಒಸಿಎ ನ್ಯಾಯಾಲಯ ಶುಕ್ರವಾರ ಜಾಮೀನು ನಿರಾಕರಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಜಾಮೀನು ಅರ್ಜಿಯನ್ನು ಆಲಿಸಿದ ಎಂಸಿಒಸಿಎ ಪ್ರಕರಣಗಳ ವಿಶೇಷ ನ್ಯಾಯಾಧೀಶ ಬಿ.ಡಿ. ಶೆಲ್ಕೆ ಅದನ್ನು ತಿರಸ್ಕರಿಸಿದರು. “ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯಲ್ಲಿ ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ವಿಕ್ಕಿ ಗುಪ್ತಾ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ” ಎಂದು ವಕೀಲ ಅಮಿತ್ ಮಿಶ್ರಾ ಹೇಳಿದ್ದಾರೆ.

ಏಪ್ರಿಲ್ 14 ರಂದು ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮೋಟಾಸೈಕಲ್‌ನಲ್ಲಿ ಸಾಗುತ್ತಾ ಗುಂಡು ಹಾರಿಸಿದ್ದ. ನಂತರ ಮುಂಬೈ ಪೊಲೀಸರು ಗುಪ್ತಾ ಮತ್ತು ಸಹ ಆರೋಪಿ ಸಾಗರ್ ಪಾಲ್ ನನ್ನು ಬಂಧಿಸಿದ್ದರು. ನಟನ ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿತ್ತು. ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಸಹೋದರ ಅನ್ಮೋಲ್ ಈ ಪ್ರಕರಣದಲ್ಲಿ ವಾಂಟೆಡ್ ಆರೋಪಿಗಳೆಂದು ಹೆಸರಿಸಲಾಗಿದೆ

ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ವ್ಯಕ್ತಿತ್ವದಿಂದ ತಾನು ಪ್ರಭಾವಿತನಾಗಿದ್ದೇನೆ ಎಂದು ಗುಪ್ತಾ ತನ್ನ ಜಾಮೀನು ಅರ್ಜಿಯಲ್ಲಿ ವಕೀಲರಾದ ಅಮಿತ್ ಮಿಶ್ರಾ ಮತ್ತು ಪಂಕಜ್ ಘಿಲ್ಡಿಯಾಲ್ ಮೂಲಕ ಹೇಳಿಕೊಂಡಿದ್ದ. ಲಾರೆನ್ಸ್ ಬಿಷ್ಣೋಯ್ ಅವರು ಭಗತ್ ಸಿಂಗ್ ಅವರ ಕಟ್ಟಾ ಅನುಯಾಯಿ. ಅವರು ಅನುಸರಿಸಿದ ತತ್ವಗಳಿಗೆ ಅಂಟಿಕೊಂಡಿದ್ದಾರೆ ಎಂದು ಗುಪ್ರಾ ಹೇಳಿದ್ದಾನೆ.

ಜಾಮೀನು ವಿರೋಧಿಸಿದ ಮುಂಬೈ ಪೊಲೀಸರು

ಗುಪ್ತಾ ಜಾಮೀನಿಗೆ ವಿರೋಧ ವಿರೋಧ ವ್ಯಕ್ತಪಡಿಸಿದ ಮುಂಬೈ ಪೊಲೀಸರು, ಜೈಲಿನಲ್ಲಿರುವ ದರೋಡೆಕೋರರ ಸಿಂಡಿಕೇಟ್ ಮೂಲಕ ಬಿಷ್ಣೋಯ್ ಆದೇಶದ ಮೇರೆಗೆ ಈ ಅಪರಾಧ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಜಾಮೀನು ನೀಡಿದರೆ ಗುಪ್ತಾ ತಮ್ಮ ಕಸ್ಟಡಿಯಲ್ಲಿ ನಡೆಸಿದ ತನಿಖೆಯ ಬಗ್ಗೆ ಬಿಷ್ಣೋಯ್‌ಗೆ ತಿಳಿಸಬಹುದು. ಇನ್ನೂ ಪಡೆಯಬೇಕಾದ ಪುರಾವೆಗಳು ನಾಶವಾಗಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Salman khan : 60 ಬಾಡಿಗಾರ್ಡ್‌ಗಳ ಜತೆ ಬಿಗ್‌ ಬಾಸ್‌ ಶೂಟಿಂಗ್‌ಗೆ ತೆರಳಿದ ಸಲ್ಮಾನ್ ಖಾನ್‌!

ಬಿಷ್ಣೋಯ್ ಸಹೋದರರಾದ ಲಾರೆನ್ಸ್ ಮತ್ತು ಅನ್ಮೋಲ್ ಅವರ ಆದೇಶದ ಮೇರೆಗೆ ಗುಪ್ತಾ ಅಪರಾಧಕ್ಕೆ ಬಳಸಿದ ಮೋಟಾಸೈಕಲ್ ಖರೀದಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಇತರರಲ್ಲಿ ಸೋನುಕುಮಾರ್ ಬಿಷ್ಣೋಯ್, ಮೊಹಮ್ಮದ್ ರಫೀಕ್ ಚೌಧರಿ ಮತ್ತು ಹರ್ಪಾಲ್ ಸಿಂಗ್ ಸೇರಿದ್ದಾರೆ. ಒಬ್ಬ ಆರೋಪಿ ಅನುಜ್ ಕುಮಾರ್ ಥಾಪನ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮುಂಬೈ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ ಪ್ರಕಾರ ಲಾರೆನ್ಸ್ ಮತ್ತು ಅನ್ಮೋಲ್ ಬಿಷ್ಣೋಯ್ ಅವರನ್ನು ವಾಂಟೆಡ್ ಆರೋಪಿಗಳಾಗಿ ತೋರಿಸಲಾಗಿದೆ.