Saturday, 14th December 2024

Sambhal Mosque: ಕಿವಿ ಕಿತ್ತು ಹೋಗುವಂಥ ಲೌಡ್‌ ಸ್ಪೀಕರ್- ಸಂಭಾಲ್‌ ಮಸೀದಿಗೆ ಬಿತ್ತು 2 ಲಕ್ಷ ರೂ. ದಂಡ; ಇಮಾಮ್‌ ಅರೆಸ್ಟ್‌

ಲಖನೌ: ಸಂಭಾಲ್‌(Sambhal) ಇತ್ತೀಚೆಗೆ ಬಹು ಚರ್ಚಿತ ವಿಷಯವಾಗಿದೆ. ಮೊಘಲರ(Moghal) ಕಾಲದ ಮಸೀದಿಯೊಂದರ ಸರ್ವೇಯಾದ(Survey) ಮೇಲೆ ಅಲ್ಲಿ ಭಾರೀ ಹಿಂಸಾಚಾರ ನಡೆದಿದ್ದು,ಈವರೆಗೆ ನಾಲ್ವರ ಹತ್ಯೆಯಾಗಿದೆ. ಈಗ ಅಲ್ಲಿನ ಮಸೀದಿಯೊಂದರಲ್ಲಿ(Sambhal Mosque) ನಿನ್ನೆ(ಡಿ.14) ಕಿವಿ ಕಿತ್ತು ಹೋಗುವಂಥ ಲೌಡ್‌ ಸ್ಪೀಕರ್‌(Loudspeaker) ಬಳಸಿದ್ದಕ್ಕಾಗಿ ಇಮಾಮ್‌ಗೆ 2 ಲಕ್ಷ ರೂಪಾಯಿ ದಂಡ(2 Lakh Fine) ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಆತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮಸೀದಿಯಲ್ಲಿ ಹೆಚ್ಚಿನ ವಾಲ್ಯೂಮ್‌ ನ ಧ್ವನಿ ವರ್ಧಕವನ್ನು ಬಳಸಲಾಗುತ್ತಿತ್ತು. ಇದರಿಂದ ತೀವ್ರ ಶಬ್ಧ ಮಾಲಿನ್ಯ ಆಗುತ್ತಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಇಮಾಮ್ 23 ವರ್ಷದ ತಹಜೀಬ್(Tahzeeb) ಎಂದು ತಿಳಿದು ಬಂದಿದೆ. ಆತನನ್ನು ಈಗಾಗಲೇ ಅರೆಸ್ಟ್‌ ಮಾಡಿ ಬರೋಬ್ಬರಿ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದೇವೆ. ಇಮಾಮ್‌ ಗೆ ಸದ್ಯ ಜಾಮೀನು ಸಿಕ್ಕಿದ್ದು, ಬಿಡುಗಡೆಗೊಂಡಿದ್ದಾನೆ ಎಂದು ಸಂಭಾಲ್ ಸಬ್- ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ವಂದನಾ ಮಿಶ್ರಾ ಹೇಳಿದ್ದಾರೆ. ಆಡಳಿತ ಅಧಿಕಾರಿಗಳ ಪ್ರಕಾರ ಕೋಟ್ ಗರ್ವಿ ಪ್ರದೇಶದ ಅನಾರ್ ವಾಲಿ ಮಸೀದಿಯಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿಯಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಇಮಾಮ್‌ಗೆ ಆರು ತಿಂಗಳುಗಳ ಕಾಲ ಮಸೀದಿ ಪ್ರಕ್ರಿಯೆಗಳಿಂದ ದೂರವಿರುವಂತೆ ಆದೇಶಿಸಿದೆ.

ಸಂಭಾಲ್‌ ಹಿಂಸಾಚಾರ ಪ್ರಕರಣ

ಮೊಘಲರ ಕಾಲದ ಶಾಹಿ ಜಾಮಾ ಮಸೀದಿಗೆ ಕಳೆದ ತಿಂಗಳು ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆಗಾಗಿ ಅಧಿಕಾರಿಗಳ ತಂಡ ತೆರಳಿತ್ತು. ಈ ವೇಳೆ ಸ್ಥಳೀಯರು ಮತ್ತು ಪೊಲೀಸರ ನಡುವೆ ಭಾರೀ ಘರ್ಷಣೆ ನಡೆದಿತ್ತು. ಘರ್ಷಣೆ ತಾರಕಕ್ಕೇರಿ ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಮತ್ತು ಲಾಠಿಚಾರ್ಜ್‌ ಮಾಡಿದ್ದರು. ಸುಮಾರು 20 ಪೊಲೀಸ್ ಸಿಬ್ಬಂದಿಗಳಿಗೆ ಗಂಭೀರ ಗಾಯಗಳಾಗಿತ್ತು. ತಲೆಗೆ ಪೆಟ್ಟಾಗಿದ್ದ ಕಾನ್‌ಸ್ಟೇಬಲ್‌ ಒಬ್ಬರ ಸ್ಥಿತಿ ಚಿಂತಾಜನಕವಾಗಿತ್ತು. ಈ ಸಂಬಂಧ ಕನಿಷ್ಠ 25 ಜನರನ್ನು ಬಂಧಿಸಲಾಗಿತ್ತು. ಸರಿ ಸುಮಾರು 400 ಜನರ ವಿರುದ್ಧ 7 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದರು.

ಸಂಭಾಲ್‌ ಹಿಂಸಾಚಾರ;ಸಂಸತ್ತಿನಲ್ಲಿ ಪ್ರತಿಪಕ್ಷಗಳಿಂದ ಸಭಾತ್ಯಾಗ

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆಗಾಗಿ ಪಟ್ಟು ಹಿಡಿದು ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರತಿಪಕ್ಷಗಳ ಸಂಸದರು ಕಳೆದ ವಾರ ಸದನದಿಂದ ಸ್ವಲ್ಪಕಾಲ ಸಭಾತ್ಯಾಗ ಮಾಡಿದ್ದರು

ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ, ತನ್ನ ಆಸನದಿಂದ ಮೇಲೆದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ವಿಷಯ ಪ್ರಸ್ತಾಪಿಸಿ, ಸಂಭಾಲ್ ವಿಚಾರ ಕುರಿತು ಮಾತನಾಡಲು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಅನುಮತಿ ಕೋರಿದ್ದರು. ಇದು ತುಂಬಾ ಗಂಭೀರವಾದ ವಿಷಯ. ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಪೀಕರ್ ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ಕೊಡುವುದಾಗಿ ಹೇಳಿದ್ದರು. ಇದರಿಂದ ಕೆರಳಿದ ಯಾದವ್ ಹಾಗೂ ಅವರ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದರು.ಈ ಮಧ್ಯೆ ಕೆಲ ಎಸ್ ಪಿ ಸದಸ್ಯರು ಸದನದಲ್ಲಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಧ್ಯೆ ಡಿಎಂಕೆ ಸದಸ್ಯ ಎ ರಾಜಾ, ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷದ ಸದಸ್ಯರು ಎಸ್‌ಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದರು

ಎನ್‌ಸಿಪಿ ಮತ್ತು ಶಿವಸೇನೆ-ಯುಬಿಟಿ ಸದಸ್ಯರು ಸಮಾಜವಾದಿ ಪಕ್ಷದ ಸಂಸದರ ಬೆಂಬಲಕ್ಕೆ ಎದ್ದು ನಿಂತಿದ್ದರು. ಕೆಲ ಕಾಂಗ್ರೆಸ್ ಸದಸ್ಯರು ಕೂಡ ಎದ್ದು ನಿಂತು, ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ಇನ್ನು ನಿನ್ನೆ(ಡಿ.13) ಪ್ರಿಯಾಂಕಾ ಗಾಂಧಿ ಅವರು ಕೂಡ ತಮ್ಮ ಸಂಸತ್ತಿನ ಚೊಚ್ಚಲ ಭಾಷಣದಲ್ಲಿ ಸಂಭಾಲ್‌ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಿದ್ದರು. ನರೇಂದ್ರ ಮೋದಿ ಅವರನ್ನು ಮಾತಿನಿಂದ ತಿವಿದಿದ್ದರು. ಪ್ರಿಯಾಂಕಾ ಗಾಂಧಿ ಅವರ ಮೊದಲ ಭಾಷಣಕ್ಕೆ ಸೋನಿಯಾ,ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನ ಹಲವು ಹಿರಿಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನೂ ಓದಿ:ಭಾರತದ ಸಂವಿಧಾನ ಆರ್‌ಎಸ್‌ಎಸ್‌ನ ರೂಲ್‌ ಬುಕ್‌ ಅಲ್ಲ; ಸಂಸತ್‌ನ ಮೊದಲ ಭಾಷಣದಲ್ಲೇ ಮೋದಿಗೆ ತಿವಿದ ಪ್ರಿಯಾಂಕಾ ಗಾಂಧಿ