Wednesday, 11th December 2024

Sapna Singh: ನಟಿ ಸಪ್ನಾ ಸಿಂಗ್‌ ಪುತ್ರನ ಅನುಮಾನಾಸ್ಪದ ಸಾವು; ಬಾಲಕನ ಇಬ್ಬರು ಸ್ನೇಹಿತರು ಅರೆಸ್ಟ್

ರಾಯ್‌ಬರೇಲಿ: ನಟಿ ಸಪ್ನಾ ಸಿಂಗ್‌ ಪುತ್ರ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದೆ. ತಮ್ಮ 14 ವರ್ಷದ ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಸಪ್ನಾ ಸಿಂಗ್(Sapna Singh) ಇಂದು ಪ್ರತಿಭಟನೆ(Protest) ನಡೆಸಿದ್ದಾರೆ.ಈ ಪ್ರಕರಣದ ಸಂಬಂಧ ಮೃತ ಬಾಲಕನ ಇಬ್ಬರು ಸ್ನೇಹಿತರನ್ನು(Friends) ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಇಂದು(ಡಿ.11) ತಿಳಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ನಂತರ, ಸುಮಾರು 90 ನಿಮಿಷಗಳ ಕಾಲದ ತಮ್ಮ ಪ್ರತಿಭಟನೆಯನ್ನು ಮಂಗಳವಾರ ಸಪ್ನಾ ಸಿಂಗ್ ಅಂತ್ಯಗೊಳಿಸಿದ್ದರು. ಸಾವಿನ ಕುರಿತು ತನಿಖೆ ನಡೆಸಿರುವ ಪೊಲೀಸರು ಸಪ್ನಾ ಸಿಂಗ್ ಅವರ ಪುತ್ರ ಸಾಗರ್ ಗಂಗ್ವಾರ್(Sagar Gangwar) ನ ಇಬ್ಬರು ಸ್ನೇಹಿತರಾದ ಅನುಜ್(Anuj) ಮತ್ತು ಸನ್ನಿಯನ್ನು(Sunny) ಬಂಧಿಸಿದ್ದಾರೆ. ಹತ್ಯೆ ಪ್ರಕರಣದ ಆರೋಪದಲ್ಲಿ ಅವರಿಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿನ ನಿಖರ ಕಾರಣ ದೃಢಪಡದಿದ್ದರೂ, ವಿಷಪ್ರಾಶನ ಅಥವಾ ಹೆಚ್ಚುವರಿ ಪ್ರಮಾಣದ ಮಾದಕ ದ್ರವ್ಯ ಸೇವಿಸಿರುವ ಲಕ್ಷಣಗಳು ಕಂಡು ಬಂದಿವೆ. ಎಂಜಲಿನ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಸಂಗ್ರಹಿಸಿಡಲಾಗಿದೆ” ಎಂದು ಫತೇಪುರ್ ವೃತ್ತಾಧಿಕಾರಿ ಅಶುತೋಷ್ ಶಿವಂ ಹೇಳಿದ್ದಾರೆ.

“ನಾವು ಸಾಗರ್‌ನೊಂದಿಗೆ ಮಾದಕ ದ್ರವ್ಯ ಹಾಗೂ ಮದ್ಯವನ್ನು ಸೇವಿಸಿದ್ದೆವು ಎಂದು ವಿಚಾರಣೆಯ ವೇಳೆ ಅನುಜ್ ಮತ್ತು ಸನ್ನಿ ಒಪ್ಪಿಕೊಂಡಿದ್ದಾರೆ. ಮಿತಿ ಮೀರಿದ ಮಾದಕ ದ್ರವ್ಯ ಸೇವನೆಯಿಂದ ಸಾಗರ್ ಕುಸಿದು ಬಿದ್ದಿದ್ದಾನೆ. ಇದರಿಂದ ಗಾಬರಿಗೊಳಗಾಗಿರುವ ಅವರಿಬ್ಬರೂ, ಆತನ ಮೃತ ದೇಹವನ್ನು ಹೊಲವೊಂದಕ್ಕೆ ಎಳೆದುಕೊಂಡು ಹೋಗಿ ಬಿಸಾಡಿ ಪರಾರಿಯಾಗಿದ್ದಾರೆ” ಎಂದು ಭುತ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 8ನೇ ತರಗತಿ ವಿದ್ಯಾರ್ಥಿಯಾದ ಸಾಗರ್ ಗಂಗ್ವಾರ್, ಬರೇಲಿಯಲ್ಲಿರುವ ಆನಂದ್ ವಿಹಾರ್ ಕಾಲೋನಿಯಲ್ಲಿ ತನ್ನ ತಾಯಿಯ ಚಿಕ್ಕಪ್ಪನಾದ ಓಂ ಪ್ರಕಾಶ್ ಅವರೊಂದಿಗೆ ವಾಸಿಸುತ್ತಿದ್ದ ಎಂದು ಹೇಳಲಾಗಿದೆ. ಆತನ ಮೃತದೇಹವು ಇಝ್ಝತ್ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಅದಾಲಖಿಯ ಗ್ರಾಮದಲ್ಲಿ ಭಾನುವಾರ(ಡಿ.8) ಬೆಳಗ್ಗೆ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.

ಡ್ರಗ್ಸ್‌ ಪ್ರಕರಣದಲ್ಲಿ ತಮಿಳು ನಟ ಮನ್ಸೂರ್‌ ಅಲಿ ಖಾನ್‌ ಪುತ್ರ ಅರೆಸ್ಟ್‌

ಇತ್ತೀಚೆಗಷ್ಟೇ ಗಾಂಜಾ ಮತ್ತು ಮಾದಕ ದ್ರವ್ಯ ದಂಧೆಕೋರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ತಮಿಳು ಚಲನಚಿತ್ರ ನಟ ಮನ್ಸೂರ್ ಅಲಿ ಖಾನ್‌(Mansoor Ali Khan) ಪುತ್ರನನ್ನು ಚೆನ್ನೈ ಪೊಲೀಸರು ಬಂಧಿಸಿದ್ದರು. ಅಲಿ ಖಾನ್ ತುಘಲಕ್(Ali Khan Tughalaq) ನನ್ನು ತಿರುಮಂಗಲಂ(‌Tirumangalam) ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಗಾಂಜಾ ವ್ಯಾಪಾರದಲ್ಲಿ ತೊಡಗಿರುವ ವ್ಯಕ್ತಿಗಳು ಈ ಹಿಂದಿನಿಂದಲೂ ಆತನೊಂದಿಗೆ ಸಂಪರ್ಕ ಹೊಂದಿರುವುದಾಗಿ ಗುಪ್ತಚರ ಇಲಾಖೆಯು ಮಾಹಿತಿ ನೀಡಿದ ನಂತರ ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹತ್ತು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ಸೆಯಾದ್ ಸಾಕಿ, ಮೊಹಮ್ಮದ್ ರಿಯಾಸ್ ಅಲಿ ಮತ್ತು ಫೈಸಲ್ ಅಹ್ಮದ್ ಎಂಬುವವರು ಸೇರಿದ್ದರು.

ಈ ಸುದ್ದಿಯನ್ನೂ ಓದಿ: SM Krishna Death: ರಾಜ್‌ಕುಮಾರ್‌ ಅಪಹರಣ ಪ್ರಕರಣವನ್ನು ಎಸ್‌ಎಂ ಕೃಷ್ಣ ಎದುರಿಸಿದ್ದು ಹೇಗೆ?