Wednesday, 11th December 2024

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಚೆನ್ನೈ: ಮಾಜಿ ಐಎಎಸ್ ಅಧಿಕಾರಿ ತಮಿಳುನಾಡು ಮೂಲದ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸೋಮವಾರ ತಮಿಳುನಾಡು ಕಾಂಗ್ರೆಸ್ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. “ನಾನು ರಾಜಕೀಯ ಬರಲು ತೀರ್ಮಾನಿಸಿದ್ದೇನೆ. ಕಾಂಗ್ರೆಸ್ ಪಕ್ಷ ಸೇರಲಿದ್ದೇನೆ” ಎಂದು ಭಾನುವಾರ ಹೇಳಿಕೆ ನೀಡಿದ್ದರು.

ಸಸಿಕಾಂತ್ ಸೆಂಥಿಲ್ 2009ನೇ ಬ್ಯಾಚ್ ಕರ್ನಾಟಕ ಕೇಡರ್‌ ಐಎಎಸ್ ಅಧಿಕಾರಿ. 2017ರ ಅಕ್ಟೋಬರ್ 10ರಿಂದ 2019ರ ಸೆಪ್ಟೆಂಬರ್ 6ರ ತನಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದರು.

ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ, ಅದು ಅಂಗೀಕಾರಗೊಂಡ ಬಳಿಕ ಸಸಿಕಾಂತ್ ಸೆಂಥಿಲ್ ಕೇಂದ್ರ ಸರ್ಕಾರದ ವಿವಿಧ ನೀತಿಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಸಿಎಎ, ಎನ್‌ಆರ್‌ಸಿ ವಿರುದ್ಧ ದೇಶವ ವಿವಿಧ ಭಾಗಗಳಲ್ಲಿ ನಡೆದ ವಿರೋಧಿ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಮಿಳುನಾಡು ಮೂಲದ ಅಣ್ಣಾಮಲೈ ಅವರು ಈಗಾಗಲೇ ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದಾರೆ. ಪಕ್ಷ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ. ತಮಿಳುನಾಡು ರಾಜ್ಯದ ಚುನಾವಣೆಗೆ 7 ತಿಂಗಳು ಬಾಕಿ ಇದೆ.