Thursday, 3rd October 2024

ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದಿನ ವರ್ಷ ಜನವರಿ 5ಕ್ಕೆ ಮುಂದೂಡಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜೈನ್ ಮತ್ತು ಇಬ್ಬರು ಸಹ ಆರೋಪಿಗಳು ಸಲ್ಲಿಸಿರುವ ಮನವಿಯನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಆಲಿಸುವ ನಿರೀಕ್ಷೆಯಿದೆ. ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ನವೆಂಬರ್ 17 ರಂದು ಮೂವರಿಗೂ ಜಾಮೀನು ನಿರಾಕರಿಸಿದ್ದಾರೆ.

ಪ್ರಕರಣದಲ್ಲಿ ಜೈನ್ ಅವರ ಜಾಮೀನು ಅರ್ಜಿಯ ಕುರಿತು ಡಿಸೆಂಬರ್ 1ರಂದು ಹೈಕೋರ್ಟ್, ಜಾರಿ ನಿರ್ದೇಶನಾಲಯದ (ಇ.ಡಿ) ಪ್ರತಿಕ್ರಿಯೆ ಕೇಳಿತ್ತು. ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಮರ್ತಿ ಶರ್ಮಾ ಅವರು ಇ.ಡಿಗೆ ಸೂಚಿಸಿದ್ದರು.

ಡಿ. 12 ರಂದು ಜೈನ್ ಅವರ ಸಹ ಆರೋಪಿಗಳಾದ ಅಂಕುಶ್ ಜೈನ್ ಮತ್ತು ವೈಭವ್ ಜೈನ್ ಅವರು ಸಲ್ಲಿಸಿದ ಜಾಮೀನು ಅರ್ಜಿಗಳ ಕುರಿತು ಹೈಕೋರ್ಟ್ ಇ.ಡಿಗೆ ನೋಟಿಸ್ ಜಾರಿ ಮಾಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಇ.ಡಿ ನ್ಯಾಯಾಲಯದ ಮುಂದೆ ಜುಲೈ 27 ರಂದು ಚಾರ್ಜ್ ಶೀಟ್ ಸಲ್ಲಿಸಿದೆ. ಜೈನ್ ಅವರು ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ (2015ರ ಫೆಬ್ರವರಿ 14 ರಿಂದ 2017 ರ ಮೇ 31 ರವರೆಗೆ) ಜೈನ್ ಅವರೊಂದಿಗೆ ನಂಟು ಹೊಂದಿರುವ ನಾಲ್ಕು ಕಂಪನಿಗಳ ಮೂಲಕ ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

Read E-Paper click here