Friday, 13th December 2024

Satyendar Jain: 2 ವರ್ಷಗಳ ಜೈಲುವಾಸದ ನಂತರ ಕೊನೆಗೂ ಎಎಪಿ ನಾಯಕ ಸತ್ಯೇಂದ್ರ ಜೈನ್‌ಗೆ ಜಾಮೀನು

Satyendar Jain

ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿಯಲ್ಲಿನ (Delhi Liquor Policy Case) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ, ದಿಲ್ಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ (Satyendar Jain) ಅವರಿಗೆ ದಿಲ್ಲಿಯ ನ್ಯಾಯಾಲಯ ಶುಕ್ರವಾರ (ಅಕ್ಟೋಬರ್‌ 18) ಜಾಮೀನು ಮಂಜೂರು ಮಾಡಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 2022ರ ಮೇಯಲ್ಲಿ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿತ್ತು. 2010-12 ಹಾಗೂ 2015 ಹಾಗೂ 16ರಲ್ಲಿ ವಿವಿಧ ಕಂಪೆನಿಗಳಿಂದ ಇವರು ಅಕ್ರಮವಾಗಿ ಹಣ ಪಡೆಯಲಾಗಿದೆ ಎಂದು ಹೇಳಲಾಗಿತ್ತು.

ವಿಚಾರಣೆಯ ವಿಳಂಬ ಮತ್ತು 18 ತಿಂಗಳ ಸುದೀರ್ಘ ಸೆರೆವಾಸವನ್ನು ಪರಿಗಣಿಸಿ ಮತ್ತು ವಿಚಾರಣೆ ಪ್ರಾರಂಭವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಅಂಶವನ್ನು ಪರಿಗಣಿಸಿ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಜಾಮೀನು ಮಂಜೂರು ಮಾಡಿದರು. ಪಿಟಿಐ ವರದಿಯ ಪ್ರಕಾರ, ನ್ಯಾಯಾಧೀಶರು 50,000 ರೂ.ಗಳ ಬಾಂಡ್ ಮೇಲೆ ಜಾಮೀನು ನೀಡಿದ್ದಾರೆ.

ಮನೀಶ್ ಸಿಸೋಡಿಯಾ ಹೇಳಿದ್ದೇನು?

ಜಾಮೀನು ಸಿಕ್ಕ ಕೂಡಲೇ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಸತ್ಯಮೇವ ಜಯತೆ ಎಂದು ಪೋಸ್ಟ್ ಮಾಡಿದ್ದಾರೆ. ʼʼದೇಶದ ಸಂವಿಧಾನ ದೀರ್ಘ ಕಾಲ ಬಾಳಲಿ. ಸರ್ವಾಧಿಕಾರಿಯ ಸರ್ವಾಧಿಕಾರಕ್ಕೆ ಮತ್ತೊಮ್ಮೆ ಕಪಾಳಮೋಕ್ಷವಾಗಿದೆ. ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸತ್ಯೇಂದ್ರ ಜೈನ್ ಅವರನ್ನು ಇಷ್ಟು ದೀರ್ಘ ಕಾಲ ಜೈಲಿನಲ್ಲಿರಿಸಲಾಗಿತ್ತು. ಅವರ ಮನೆಯ ಮೇಲೆ ನಾಲ್ಕು ಬಾರಿ ದಾಳಿ ನಡೆಸಲಾಗಿತ್ತುʼʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಆದರೆ ದಾಳಿ ವೇಳೆ ಏನೂ ಕಂಡು ಬಂದಿಲ್ಲ. ಆದರೂ ಪಿಎಂಎಲ್ಎ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಅವರನ್ನು ಜೈಲಿನಲ್ಲಿರಿಸಲಾಯಿತು. ಸತ್ಯ ಮತ್ತು ನ್ಯಾಯವನ್ನು ಬೆಂಬಲಿಸಿದ ದೇಶದ ನ್ಯಾಯಾಂಗಕ್ಕೆ ಧನ್ಯವಾದಗಳು” ಎಂದು ದಿಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಆಪ್‌ ನಾಯಕರಿಗೆ ಜಾಮೀನು

ಈ ಮೂಲಕ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿನಲ್ಲಿದ್ದ ಆಮ್ ಆದ್ಮಿ ಪಕ್ಷದ ಎಲ್ಲ ಹಿರಿಯ ನಾಯಕರು ಜಾಮೀನಿನ ಮೇಲೆ ಹೊರಬಂದತಾಗಿದೆ. ಕಳೆದ ತಿಂಗಳು ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ 17 ತಿಂಗಳು ತಿಹಾರ್ ಜೈಲಿನಲ್ಲಿ ಕಳೆದ ನಂತರ ಮನೀಶ್ ಸಿಸೋಡಿಯಾ ಅವರಿಗೆ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಮುಖಂಡ ಸಂಜಯ್ ಸಿಂಗ್ ಅವರಿಗೂ ಈ ವರ್ಷದ ಏಪ್ರಿಲ್‌ನಲ್ಲಿ ಜಾಮೀನು ಲಭಿಸಿತ್ತು. ಸದ್ಯ ಜಾಮೀನಿನ ಮೇಲೆ ಹೊರ ಬಂದಿರುವ ಅರವಿಂದ ಕೇಜ್ರಿವಾಲ್‌ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Arvind Kejriwal: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌