Friday, 29th November 2024

Saundala: ಮಹಾರಾಷ್ಟ್ರದ ಈ ಗ್ರಾಮದಲ್ಲಿ ಅವಾಚ್ಯ ಶಬ್ದ ಬಳಸಿದರೆ ಬೀಳುತ್ತೆ 500 ರೂ ದಂಡ!

Maharashtra Village Bans Cuss Words, Fines Violators ₹ 500 To Uphold Women's Dignity

ನವದೆಹಲಿ: ಸಂಭಾಷಣೆಯಲ್ಲಿ ಅವಾಚ್ಯ ಪದಗಳನ್ನು ಬಳಸುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ಗ್ರಾಮಸ್ಥರು (Saundala)ದೌರ್ಜನ್ಯ ತಪ್ಪಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಮಹಾರಾಷ್ಟ್ರದ ಸೌಂದಾಳ ಗ್ರಾಮಸ್ಥರು ಅವಾಚ್ಯ ಶಬ್ದಗಳಿಂದ ದೂರವಿದ್ದು, ಯಾವುದೇ ಸಂದರ್ಭದಲ್ಲೂ ನಿಂದನೀಯ ಪದಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಈ ಗ್ರಾಮದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುವವರಿಗೆ 500 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ.

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಸರಪಂಚ ಶರದ್ ಅರ್ಗಡೆ, ಅಹಲ್ಯಾನಗರ ಜಿಲ್ಲೆಯ ನೆವಾಸಾ ತಹಸಿಲ್‌ನ ಸೌಂದಾಳ ಗ್ರಾಮದ ಗ್ರಾಮ ಸಭೆಯು ಮಹಿಳೆಯರ ಘನತೆ ಮತ್ತು ಸ್ವಾಭಿಮಾನವನ್ನು ಗೌರವಿಸಲು ನಿಂದನೆಯ ಪದಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ ಎಂದು ತಿಳಿಸಿದ್ದಾರೆ. ಪ್ರಸ್ತಾವನೆ ಮಂಡಿಸಿ ಮಾತನಾಡಿದ ಅರ್ಗಡೆ, ಮುಂಬೈನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ವಾಗ್ವಾದದ ವೇಳೆ ತಾಯಂದಿರು ಹಾಗೂ ಸಹೋದರಿಯರನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ಪದಗಳನ್ನು ಬಳಸುವುದು ಸಾಮಾನ್ಯವಾಗಿದೆ. ಹಾಗಾಗಿ ಇನ್ನು ಮುಂದೆ ಈ ರೀತಿಯ ಅವಾಚ್ಯ ಶಬ್ದಗಳನ್ನು ಬಳಸಬಾರದು ಎಂದು ಸೂಚನೆ ನೀಡಿದ್ದಾರೆ.

ಅವಾಚ್ಯ ಶಬ್ದಗಳನ್ನು ಬಳಿಸಿದರೆ 500 ರೂ ದಂಡ

“ತಾಯಂದಿರು, ಸಹೋದರಿಯರ ಹೆಸರಿನಲ್ಲಿ ಇಂತಹ ಭಾಷೆ ಬಳಸುವವರು, ಇದು ಅವರ ಕುಟುಂಬದ ಮಹಿಳಾ ಸದಸ್ಯರಿಗೂ ಅನ್ವಯಿಸುತ್ತದೆ ಎಂಬುದನ್ನು ಮರೆತುಬಿಡುತ್ತಾರೆ. ನಿಂದನೀಯ ಭಾಷೆ ಅಥವಾ ಪದಗಳನ್ನು ನಿಷೇಧಿಸಲು ನಿರ್ಧರಿಸಿದ್ದು, ನಿಂದನೆ ಹಾಗೂ ಅವಾಚ್ಯ ಭಾಷೆಯನ್ನು ಬಳಸುವವರಿಗೆ 500 ರೂ.ದಂಡ ವಿಧಿಸಲಾಗುವುದು. ಸಮಾಜದಲ್ಲಿ ಮಹಿಳೆಯರ ಘನತೆ ಮತ್ತು ಸ್ವಾಭಿಮಾನವನ್ನು ಗೌರವಿಸುವ ಪ್ರಯತ್ನ ಇದಾಗಿದೆ,” ಎಂದು ಅವರು ಹೇಳಿದ್ದಾರೆ.

ಅನೇಕ ಸಾಂಪ್ರದಾಯಗಳ ಮೇಲೆ ನಿರ್ಬಂಧಗಳು

ಸೌಂದಾಳ ವಿಧವೆಯರಿಗೆ ಸಂಬಂಧಿಸಿದ ಪ್ರತಿಗಾಮಿ ಪದ್ಧತಿಗಳನ್ನು ಸಹ ನಿಷೇಧಿಸಲಾಗಿದೆ. “ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆ, ಪದ್ಧತಿಗಳಲ್ಲಿ ವಿಧವೆಯರನ್ನು ಸೇರಿಸುತ್ತೇವೆ. ಅದೇ ರೀತಿ, ‘ಸಿಂಧೂರ’ ಒರೆಸುವುದು, ಮಂಗಳಸೂತ್ರ ತೆಗೆಯುವುದು ಮತ್ತು ಬಳೆಗಳನ್ನು ಒಡೆಯುವುದು (ಗಂಡನ ಮರಣದ ನಂತರ) ನಿಷೇಧಿಸಲಾಗಿದೆ,” ಎಂದು ಹೇಳಿದ ಅವರು, “2011ರ ಜನಗಣತಿಯ ಪ್ರಕಾರ 1,800 ಜನರು ವಾಸಿಸುವ ಸೌಂದಾಳ, ವಿವಾದ ಮುಕ್ತ ಗ್ರಾಮವಾಗಿದೆ. 2007ರಲ್ಲಿ ಈ ಗ್ರಾಮಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಬಂದಿತ್ತು.

ಈ ಸುದ್ದಿಯನ್ನು ಓದಿ: PM Narendra Modi: ಮಹಾರಾಷ್ಟ್ರದ ಜನತೆ ಐತಿಹಾಸಿಕ ತೀರ್ಪು ನೀಡಿದ್ದಾರೆ: ಪಿಎಂ ನರೇಂದ್ರ ಮೋದಿ