Saturday, 14th December 2024

ಕಾಂಗ್ರೆಸ್‌ ಪರವಾಗಿ ಮತಯಾಚಿಸಿ, ಮುಜುಗರಕ್ಕೀಡಾದ ಸಿಂಧಿಯಾ

ಭೋಪಾಲ್‌: ಉಪ ಚುನಾವಣೆಯ ಪ್ರಚಾರದ ಸಂದರ್ಭ ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ ಬಾಯಿತಪ್ಪಿ ನಿಂದ ಕಾಂಗ್ರೆಸ್‌ ಪರವಾಗಿ ಮತಯಾಚಿಸಿ, ಮುಜುಗರಕ್ಕೀಡಾದರು.

ಗ್ವಾಲಿಯರ್‌ನ ದಾಬ್ರ ನಗರದ ಬಿಜೆಪಿ ಅಭ್ಯರ್ಥಿ ಇಮ್ರಾತಿ ದೇವಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಿಂಧಿಯಾ ಅವರು, ಕಾಂಗ್ರೆಸ್‌ಗೆ ಮತ ನೀಡುವಂತೆ ಕೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ದಾಬ್ರದ ನನ್ನ ಜನರೇ, ನೀವು ‘ಕೈ’ ಗುರುತಿಗೆ ಮತ ಹಾಕುವಿರಿ ಎಂಬುದನ್ನುನನಗೂ ಮತ್ತು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಅವರಿಗೆ ಮನವರಿಕೆ ಮಾಡಿಕೊಡಲು ನಿಮ್ಮ ಕೈಯನ್ನು ಎತ್ತಿ ಮುಷ್ಟಿ ಮಾಡಿ’ ಎಂದು ಹೇಳಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು, ಕೇಸರಿ ಪಕ್ಷದ ‘ಕಮಲ’ ಚಿಹ್ನೆಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.

ಈ ವಿಡಿಯೊವನ್ನು ಕಾಂಗ್ರೆಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಸಿಂಧಿಯಾ ಜಿ, ಮಧ್ಯಪ್ರದೇಶದ ಜನರು, ಹಸ್ತದ ಗುರುತಿಗೆ ಮತ ಹಾಕುವ ಭರವಸೆಯನ್ನು ನೀಡುತ್ತಾರೆ’ ಎಂದು ಬರೆದುಕೊಂಡಿದೆ.

‘ಇಂತಹ ಎಡವಟ್ಟು ಯಾವುದೇ ವ್ಯಕ್ತಿಯಿಂದಲೂ ಆಗಬಹುದು. ಸಿಂಧಿಯಾ ಅವರು ತಕ್ಷಣ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿ ದ್ದಾರೆ. ಅವರು ಬಿಜೆಪಿ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ರಾಜ್ಯ ಬಿಜೆಪಿ ವಕ್ತಾರ ಪಂಕಜ್‌ ಚತುರ್ವೇದಿ ಪ್ರತಿಕ್ರಿಯಿಸಿದ್ದಾರೆ.

2002 ರಲ್ಲಿ ಕಾಂಗ್ರೆಸ್‌ ಸೇರಿದ್ದ ಸಿಂಧಿಯಾ ಅವರು ಹದಿನೆಂಟು ವರ್ಷಗಳ ನಂತರ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಬಿಜೆಪಿಗೆ ಸೇರಿದ್ದಾರೆ.