Wednesday, 11th December 2024

ಎಚ್‌ಡಿಎಫ್‌ಸಿ ವಿಲೀನ: ಸೆನ್ಸೆಕ್ಸ್ 1300 ಅಂಕಗಳ ಏರಿಕೆ

ನವದೆಹಲಿ: ಎಚ್‌ಡಿಎಫ್‌ಸಿ ಲಿಮಿಟೆಡ್‌, ಅತಿ ದೊಡ್ಡ ಖಾಸಗಿ ಬ್ಯಾಂಕ್‌ ‘ಎಚ್‌ಡಿಎಫ್‌ಸಿ ಬ್ಯಾಂಕ್‌’ನಲ್ಲಿ ವಿಲೀನವಾಗುತ್ತಿರುವ ವಿಚಾರ ಷೇರುಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿ, ಸೆನ್ಸೆಕ್ಸ್ ದಿನದಂತ್ಯಕ್ಕೆ 1300 ಅಂಕಗಳ ಏರಿಕೆ ಕಂಡಿದೆ.

ಕಾರ್ಪೊರೇಟ್ ಇತಿಹಾಸದಲ್ಲಿ ಅತಿದೊಡ್ಡ ವಿಲೀನ ಇದಾಗಿದೆ. ಭಾರತದ ಅತಿದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿ ಎಚ್‌ಡಿಎಫ್‌ಸಿ ಲಿಮಿಟೆಡ್, ದೇಶದ ಅತಿದೊಡ್ಡ ಖಾಸಗಿ ಸಾಲದಾತ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಬ್ಯಾಂಕಿಂಗ್ ಬೆಹೆಮೊತ್ ಅನ್ನು ರಚಿಸಲು ವಿಲೀನಗೊಳ್ಳಲಿದೆ.

ಎಚ್‌ಡಿಎಫ್‌ಸಿ ಲಿಮಿಟೆಡ್‌ ಎಚ್‌ಡಿಎಫ್‌ಸಿ ಬ್ಯಾಂಕ್‌’ನಲ್ಲಿ ವಿಲೀನವಾಗುತ್ತಿರುವ ಕುರಿತು ಪ್ರಕಟಣೆ ಹೊರ ಬೀಳುತ್ತಿದ್ದಂತೆ ಎಚ್‌ಡಿಎಫ್‌ಸಿ ಲಿಮಿಟೆಡ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಎರಡರ ಷೇರು ಬೆಲೆ ಶೇ.10ರಷ್ಟು ಏರಿಕೆ ದಾಖಲಿಸಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್‌ ಪ್ರತಿ ಷೇರು ಬೆಲೆ 2,636ರೂ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರು ಬೆಲೆ 1,630ರೂಗೆ ತಲುಪಿದೆ.

ಪ್ರಸ್ತುತ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಒಟ್ಟು ಆಸ್ತಿ ಮೌಲ್ಯ 6.23ರೂ ಲಕ್ಷ ಕೋಟಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಆಸ್ತಿ ಮೌಲ್ಯ 19.38 ಲಕ್ಷ ರೂ ಕೋಟಿ ಇದೆ. ವಿಲೀನ ಪ್ರಕ್ರಿಯೆ ಯು 2023-2024ನೇ ಹಣಕಾಸು ವರ್ಷದ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಬ್ಯಾಂಕ್ ನಡುವಿನ ವಿಲೀನದ ಘೋಷಣೆಯ ನಂತರ ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳಲ್ಲಿನ ತೀವ್ರ ಖರೀದಿಯಿಂದ ಷೇರುಮಾರುಕಟ್ಟೆ ಉತ್ತೇಜಿತಗೊಂಡಿದ್ದು, ಸೆನ್ಸೆಕ್ಸ್ 1300 ಅಂಕಗಳ ಏರಿಕೆಯಾಗಿ 60,000 ಮಟ್ಟವನ್ನು ಮರುಪಡೆದು, 60,611.74ಅಂಕಗಳಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.