Saturday, 14th December 2024

ಸೆನ್ಸೆಕ್ಸ್ 378 ಪಾಯಿಂಟ್ ಏರಿಕೆ

ಬೆಂಗಳೂರು : ಭಾರತೀಯ ಷೇರು ಮಾರುಕಟ್ಟೆಯು ಮಂಗಳವಾರ ಹಸಿರು ಬಣ್ಣದಲ್ಲಿ ದಿನದ ವಹಿವಾಟು ಮುಗಿಸಿದೆ. ಹೂಡಿಕೆದಾರರು ದಿನದ ಅಂತ್ಯಕ್ಕೆ ಲಾಭದ ಖುಷಿ ಅನುಭವಿಸಿದ್ದಾರೆ. ಕಳೆದ ದಿನ ನಿಫ್ಟಿ 50 ಏರುಗತಿಯಲ್ಲಿ ವಹಿವಾಟು ಮುಗಿಸಿದ್ದರೆ, ಸೆನ್ಸೆಕ್ಸ್‌ ಹಿಂದೆ ಬಿದ್ದಿತ್ತು.

ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸಂವೇದಿ ಸೂಚ್ಯಂಕಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಅಲ್ಪ ವ್ಯತ್ಯಾಸದೊದಿಗೆ ಅರ್ಧ ಶೇಕಡಾದಷ್ಟು ಏರಿಕೆಯೊಂದಿಗೆ ವಹಿವಾಟು ಮುಗಿಸಿದವು. ಜಾಗತಿಕ ಮಾರುಕಟ್ಟೆಯಲ್ಲಿ ಏರುಗತಿಯ ಸೂಚನೆ ಭಾರತೀಯ ಮಾರುಕಟ್ಟೆ ಮೇಲೂ ಧನಾತ್ಮಕ ಪ್ರಭಾವ ಬೀರಿದವು.

ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 378 ಪಾಯಿಂಟ್ (0.47) ಏರಿಕೆಯೊಂದಿಗೆ 80,802.86 ಅಂಕಗಳಲ್ಲಿ ದಿನದ ವಹಿವಾಟು ನಿಲ್ಲಿಸಿದೆ. ಅತ್ತ ಮಾರುಕಟ್ಟೆ ಅವಧಿ ಮುಕ್ತಾಯದ ವೇಳೆಗೆ ನಿಫ್ಟಿ 50ಯು 126 ಪಾಯಿಂಟ್ (0.51) ಏರಿಕೆ ಕಂಡು 24,698.85ರಲ್ಲಿ ಸ್ಥಿರವಾಗಿ ನಿಂತಿದೆ.

ಸುಮಾರು 2048 ಷೇರುಗಳು ಲಾಭದತ್ತ ಮುಖಮಾಡಿದರೆ, 1391 ಷೇರುಗಳ ಮೌಲ್ಯ ಕೆಳಮುಖ ಮಾಡಿವೆ. ಉಳಿದಂತೆ 81 ಷೇರುಗಳು ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿ ನಿಂತಿವೆ.

ಟಿಸಿಎಸ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಅಶೋಕ್ ಲೇಲ್ಯಾಂಡ್, ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಟ್ರೆಂಟ್ ಸೇರಿದಂತೆ ಸುಮಾರು 300 ಷೇರುಗಳು ಬಿಎಸ್‌ಇಯಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.

ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಎಚ್‌ಡಿಎಫ್‌ಸಿ ಲೈಫ್, ಬಜಾಜ್ ಫಿನ್‌ಸರ್ವ್, ಶ್ರೀರಾಮ್ ಫೈನಾನ್ಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಶೇರುಗಳಲ್ಲಿ ಹೂಡಿಕೆ ಮಾಡಿದವರು ನಿಫ್ಟಿಯಲ್ಲಿ ಭಾರಿ ಲಾಭ ಗಳಿಸಿದರು.

ಎಫ್‌ಎಂಸಿಜಿ ಹೊರತುಪಡಿಸಿ, ಬ್ಯಾಂಕ್, ಹೆಲ್ತ್‌ಕೇರ್, ಐಟಿ, ಮೆಟಲ್, ಪವರ್ ಶೇ. 0.5ರಿಂದ 1ರಷ್ಟು ಏರಿಕೆ ಕಂಡವು. ಇತರ ಎಲ್ಲ ವಲಯದ ಸೂಚ್ಯಂಕ ಗಳು ಹಸಿರು ಬಣ್ಣದಲ್ಲಿ ದಿನದ ವಹಿವಾಟು ಮುಗಿಸಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ.1ರಷ್ಟು ಏರಿಕೆ ಕಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.5 ರಷ್ಟು ಏರಿಕೆ ಕಂಡಿದೆ.