Saturday, 23rd November 2024

ಸೆನ್ಸೆಕ್ಸ್, ನಿಫ್ಟಿ ಉತ್ತಮ ಗಳಿಕೆ

ಮುಂಬೈ: ಪ್ರಸಕ್ತ ಹಣಕಾಸು ವರ್ಷ (2023-24ನೇ)ದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 8.4ರಷ್ಟು ದಾಖಲಾಗಿರುವುದು ಮತ್ತು ವಿದೇಶಿ ಬಂಡವಾಳ ಹರಿವು ಹೆಚ್ಚಿರುವುದು ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ಗಳಿಕೆ ಕಂಡಿವೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 417.77 ಅಂಶಗಳಷ್ಟು ಏರಿಕೆ ಕಂಡು 72,918.07 ರಲ್ಲಿ ವಹಿವಾಟು ಆರಂಭಿಸಿದೆ. ನಿಫ್ಟಿ 142.85 ಅಂಶಗಳಷ್ಟು ಏರಿಕೆ ಕಂಡು 22,125.65 ರಲ್ಲಿ ವಹಿವಾಟು ಆರಂಭಿಸಿದೆ.

ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಜೆಎಸ್‌ಡಬ್ಲ್ಯು ಸ್ಟೀಲ್, ಮಹೀಂದ್ರಾ ಅಂಡ್ ಮಹೀಂದ್ರ, ಲಾರ್ಸನ್ ಅಂಡ್ ಟೌಬ್ರೊ, ಪವರ್ ಗ್ರಿಡ್, ಇಂಡಸ್‌ ಲ್ಯಾಂಡ್ ಬ್ಯಾಂಕ್, ಎನ್‌ಟಿಪಿಸಿ ಮತ್ತು ಐಸಿಐಸಿಐ ಬ್ಯಾಂಕ್ ಗಳಿಕೆ ಕಂಡ ಸೆನ್ಸೆಕ್ಸ್‌ನ ಪ್ರಮುಖ ಕಂಪನಿಗಳಾಗಿವೆ. ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಹಿಂದುಸ್ಥಾನ್ ಯುನಿಲಿವರ್ ಮತ್ತು ಏಷಿಯನ್ ಪೇಂಟ್ಸ್ ಕಂಪನಿಗಳು ನಷ್ಟ ಅನುಭವಿಸಿವೆ.

2023ರ ಕೊನೆಯ ತ್ರೈಮಾಸಿಕದಲ್ಲಿ ಭಾರತದ ಬೆಳವಣಿಗೆ ದರ ಅಂದಾಜಿಗೂ ಮೀರಿ ಶೇ.8.4 ರಷ್ಟು ದಾಖಲಾಗಿರುವುದು ಷೇರುಪೇಟೆ ಮೇಲೆ ಪರಿಣಾಮ ಬೀರಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದಲ್ಲಿ 0.07ರಷ್ಟು ಇಳಿಕೆ ಕಂಡಿದ್ದು, ಬ್ಯಾರೆಲ್ ಕಚ್ಚಾ ತೈಲ ಬೆಲೆ $83.62 ಮಾರಾಟ ವಾಗುತ್ತಿದೆ.