Friday, 13th December 2024

ವೆಂಕಟೇಶ್ವರ ದೇಗುಲದ ಆರ್ಜಿತ ಸೇವೆಗಳ ಶುಲ್ಕಗಳಲ್ಲಿ ಹೆಚ್ಚಳ

ತಿರುಪತಿ: ತಿರುಮಲದಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿನ ಆರ್ಜಿತ ಸೇವೆಗಳ ಶುಲ್ಕಗಳಲ್ಲಿ ಗಣನೀಯವಾಗಿ ಪರಿಷ್ಕರಣೆ ಮಾಡಲು ತಿರುಮಲ ತಿರುಪತಿ ದೇವಸ್ಥಾ ನಮ್ಸ್‌ ಮುಂದಾಗಿದೆ.

ವಿವೇಚನಾ ಕೋಟಾಕ್ಕೆ ಸಂಬಂಧಿಸಿದ ಸೇವೆಗಳ ದರದಲ್ಲಿ ಬದಲಾವಣೆಯಾಗಿದೆ. ಫೆ.17ರಂದು ನಡೆದಿದ್ದ ಟಿಟಿಡಿ ಟ್ರಸ್ಟ್‌ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ನಿರ್ಧಾರದ ಪ್ರಕಾರ ವಸ್ತಾಲಂಕಾರ ಸೇವೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಹಾಲಿ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳಿಗೆ, ಸುಪ್ರಭಾತ ಸೇವಾ ಶುಲ್ಕವನ್ನು 240 ರೂ.ಗಳಿಂದ 2 ಸಾವಿರ ರೂ.ಗಳಿಗೆ, ತೋಮಲ ಸೇವಾ ಶುಲ್ಕವನ್ನು 440 ರೂ.ಗಳಿಂದ 5 ಸಾವಿರ ರೂ.ಗಳ ವರೆಗೆ, ಕಲ್ಯಾಣೋತ್ಯವ ಸೇವಾ ಶುಲ್ಕ ಹಾಲಿ 1 ಸಾವಿರ ರೂ.ಗಳಿಂದ 2,500 ರೂ.ಗಳಿಗೆ, ವೇದಾಶೀರ್ವಾದಕ್ಕೆ ಹಾಲಿ 3 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳಿಗೆ ಪರಿಷ್ಕರಿಸಲು ನಿರ್ಧರಿಸಲಾಗಿದೆ.

2020ರ ಮಾರ್ಚ್‌ ಬಳಿಕ ಆರ್ಜಿತ ಸೇವೆಗಳ ಸಹಿತ ಎಲ್ಲಾ ಸೇವೆಗಳೂ ಭಕ್ತರ ಉಪಸ್ಥಿತಿ ಇಲ್ಲದೆ, ಏಕಾಂತದಲ್ಲಿ ನಡೆಯುತ್ತಿತ್ತು. ಆಂಧ್ರಪ್ರದೇಶದಲ್ಲಿ ಕೊರೊನಾ ಕೇಸುಗಳ ಸಂಖ್ಯೆ ತಗ್ಗುತ್ತಿರುವುದರಿಂದ ಶ್ರೀಕ್ಷೇತ್ರದಲ್ಲಿ ಎಲ್ಲಾ ರೀತಿಯ ಸೇವೆಗಳನ್ನು ಪುನಾರಂಭಿಸಲು ಟಿಟಿಡಿ ನಿರ್ಧರಿಸಿದೆ.