Friday, 13th December 2024

ಲೈಂಗಿಕ ಕಿರುಕುಳ ಆರೋಪ: 500 ಕಾಲೇಜು ವಿದ್ಯಾರ್ಥಿನಿಯರಿಂದ ಪತ್ರ

ಸಿರ್ಸಾ: ವಿವಿಯ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸುಮಾರು 500 ಕಾಲೇಜು ವಿದ್ಯಾರ್ಥಿನಿಯರು ಪ್ರಧಾನಿ ನರೇಂದ್ರ ಮೋದಿ ಹಾಗೂ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್ ಕಟ್ಟರ್ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದಾರೆ.

ಲೈಂಗಿಕ ದೌರ್ಜನ್ಯ ನೀಡುತ್ತಿರುವ ಸಿರ್ಸಾ ನಗರದ ಚೌಧರಿ ದೇವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಅಮಾನತುಗೊಳಿಸಬೇಕು ಹಾಗೂ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆಗೊಳಪಡಿಸಬೇಕು ಎಂದು ಪತ್ರದಲ್ಲಿ ವಿದ್ಯಾರ್ಥಿನಿಯರು ಬೇಡಿಕೆಯಿಟ್ಟಿದ್ದಾರೆ.

ಚೌಧರಿ ದೇವಿ ವಿವಿಯ ಉಪಕುಲಪತಿ ಡಾ. ಅಜ್ಮಲ್ ಸಿಂಗ್ ಮಲಿಕ್, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಗೃಹ ಸಚಿವ ಅನಿಲ್ ವಿಜ್ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಹಿರಿಯ ರಾಜ್ಯ ಸರ್ಕಾದ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಪತ್ರವನ್ನು ರವಾನಿಸಿದ್ದಾರೆ. ಆರೋಪಿ ಪ್ರಾಧ್ಯಾಪಕರು ಕೊಳಕು ಹಾಗೂ ಅಶ್ಲೀಲ ಕೃತ್ಯಗಳನ್ನು ವೆಸಗಿದ್ದಾರೆ. ಅಲ್ಲದೆ ಈ ಪ್ರಾಧ್ಯಾಪಕರು ಸ್ನಾನದ ಕೊಠಡಿಗೆ ಕರೆದೋಯ್ದು ತಮ್ಮ ಖಾಸಗಿ ಭಾಗಗಳನ್ನು ಸ್ಪರ್ಶಿಸುವುದಲ್ಲದೆ ನಮ್ಮೊಂದಿಗೆ ಅಶ್ಲೀಲ ಪದ ಪ್ರಯೋಗ ಮಾಡುತ್ತಾರೆ. ನಾವು ಈ ಬಗ್ಗೆ ಪ್ರತಿಭಟಿಸಿದಾಗ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸ್ವತಃ ಉಪಕುಲಪತಿಗಳು ಲೈಂಗಿಕ ಕಿರುಕುಳ ನೀಡುವ ಪ್ರಾಧ್ಯಾಪಕರನ್ನು ರಕ್ಷಿಸುತ್ತಿದ್ದಾರೆ. ಪ್ರಾಧ್ಯಾಪಕರಿಗೆ ರಾಜಕೀಯ ಪ್ರಭಾವವಿರುವ ಕಾರಣ ನಮ್ಮನ್ನು ಕಾಲೇಜಿನಿಂದ ಉಚ್ಚಾಟಿಸುವುದಾಗಿ ಬೆದರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.