Wednesday, 18th September 2024

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವೆ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್

ಬಾರಾಮತಿ: ಕಾಂಗ್ರೆಸ್‌ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರಕ್ಕೆ ಪ್ರವೇಶಿಸಿದಾಗ ಅದರಲ್ಲಿ ಭಾಗವಹಿಸುವುದಾಗಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಭಾನುವಾರ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರಾದ ಅಶೋಕ್ ಚವ್ಹಾಣ್ ಮತ್ತು ಬಾಳಾಸಾಹೇಬ್ ಥೋರಟ್ ತಮ್ಮನ್ನು ಭೇಟಿಯಾಗಿ ಭಾರತ್ ಜೋಡೋ ಯಾತ್ರೆ, ನವೆಂಬರ್ 7 ರಂದು ರಾಜ್ಯಕ್ಕೆ ಪ್ರವೇಶಿಸಿದಾಗ ಸಾಮೂಹಿಕ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನವನ್ನು ನೀಡಿದ್ದರು ಎಂದಿದ್ದಾರೆ.

ಯಾತ್ರೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ, ಆದರೆ ಈ ಉಪಕ್ರಮದ ಮೂಲಕ ಸಮಾಜದಲ್ಲಿ ಸೌಹಾರ್ದತೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಇರುವಾಗ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಬೇರೆ ಬೇರೆ ಪಕ್ಷಗಳಿಂದ ನಮ್ಮಲ್ಲಿ ಕೆಲವರು ಯಾತ್ರೆಯಲ್ಲಿ ಪಾಲ್ಗೊಳ್ಳು ತ್ತೇವೆ ಎಂದು ಶರದ್ ಪವಾರ್ ಹೇಳಿದ್ದಾರೆ.

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯು 150 ದಿನಗಳಲ್ಲಿ 3,570 ಕಿ.ಮೀ ಪೂರೈಸಿದ್ದಯ, ಇದು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭಗೊಂಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

ಯಾತ್ರೆಯ ನೇತೃತ್ವ ವಹಿಸಿರುವ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ವರೆಗೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ನಾಲ್ಕು ರಾಜ್ಯಗಳನ್ನು ಸುತ್ತಿದ್ದಾರೆ.

ಇನ್ನು 36ನೇ ಬಿಸಿಸಿಐ ಅಧ್ಯಕ್ಷರಾಗಿ ರೋಜರ್ ಬಿನ್ನಿ ನೇಮಕದ ಕುರಿತು ಮಾತನಾಡಿದ ಅವರು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚುನಾವಣೆಯ ಮೇಲೆ ರಾಜಕೀಯ ಮಾಡಲಾಗುತ್ತಿದೆ ಎಂದು ಪವಾರ್ ವ್ಯಂಗ್ಯವಾಡಿದರು.

ಕೆಲವು ಕ್ಷೇತ್ರಗಳಲ್ಲಿ ರಾಜಕೀಯವನ್ನು ತರಬಾರದು. ಅದನ್ನು ಮಾಡುವವರು ಅಜ್ಞಾನಿಗಳು, ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ಗುಜರಾತ್‌ನ ಪ್ರತಿನಿಧಿ (ಈಗಿನ ಪ್ರಧಾನಿ) ನರೇಂದ್ರ ಮೋದಿ, ಅರುಣ್ ಜೇಟ್ಲಿ ದೆಹಲಿಯನ್ನು ಪ್ರತಿನಿಧಿಸಿದರೆ, ಅನುರಾಗ್ ಠಾಕೂರ್ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸಿದ್ದರು. ನಮ್ಮ ಕೆಲಸ ಆಟಗಾರರಿಗೆ ಸೌಲಭ್ಯಗಳನ್ನು ಒದಗಿಸಿ, ನಾವು ಇತರ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥರು ಹೇಳಿದರು.

ವಿಶ್ವಕಪ್ ವಿಜೇತ ರೋಜರ್ ಬಿನ್ನಿ ಇತ್ತೀಚೆಗೆ ಬಿಸಿಸಿಐನ 36 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.