Sunday, 13th October 2024

ದೇಶೀಯ ಷೇರುಪೇಟೆ: ಏಳನೇ ದಿನವೂ ಗಳಿಕೆಯ ಓಟ

ಮುಂಬೈ: ಬಿಎಸ್​ಇ ಸೆನ್ಸೆಕ್ಸ್  ಇದೇ ಮೊದಲ ಬಾರಿಗೆ 63,000 ಗಡಿ ದಾಟಿ ದಾಖಲೆ ನಿರ್ಮಿಸಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸ್ಥಿರತೆ ಹಾಗೂ ವಿದೇಶಿ ಹೂಡಿಕೆ ಹರಿದು ಬಂದ ಪರಿಣಾಮ ದೇಶದ ಷೇರುಪೇಟೆಗಳು ಚೇತರಿಕೆ ಕಂಡವು. ಸೆನ್ಸೆಕ್ಸ್ 417.81 ಅಂಶ ಚೇತರಿಕೆ ದಾಖಲಿಸಿ 63,099.65ರಲ್ಲಿ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ 63,303.01ರಲ್ಲಿ ವಹಿವಾಟು ನಡೆಸಿತು. ಎನ್​​ಎಸ್​ಇ ನಿಫ್ಟಿ 140.30 ಅಂಶ ಚೇತರಿಸಿ 18,758.35ರಲ್ಲಿ ದಿನದ ವಹಿವಾಟು ಕೊನೆಗೊಳಿಸಿದ್ದು, 19,000ದತ್ತ ಮುನ್ನುಗ್ಗು ತ್ತಿದೆ.

ಸೆನ್ಸೆಕ್ಸ್​ನಲ್ಲಿ ಮಹೀಂದ್ರಾ ಆಯಂಡ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ಹಿಂದೂಸ್ತಾನ್ ಯುನಿಲೀವರ್, ಭಾರ್ತಿ ಏರ್​ಟೆಲ್, ಏಷ್ಯನ್ ಪೈಂಟ್ಸ್, ಟಾಟಾ ಸ್ಟೀಲ್ ಹಾಗೂ ಟೈಟಾನ್ ಉತ್ತಮ ಗಳಿಕೆ ದಾಖಲಿಸಿವೆ.

ವಿದೇಶಿ ಹೂಡಿಕೆ ಹರಿದು ಬಂದಿರುವುದು ದೇಶೀಯ ಷೇರುಪೇಟೆಗಳ ಓಟಕ್ಕೆ ಕಾರಣವಾಗಿದೆ.​ ಆದಾಗ್ಯೂ, ಬಡ್ಡಿ ದರ ಪರಿಷ್ಕರಣೆ ವಿಚಾರವಾಗಿ ಫೆಡರಲ್ ಬ್ಯಾಂಕ್​ ಏನು ಹೇಳಿಕೆ ನೀಡ ಲಿದೆ ಎಂಬುದರ ಮೇಲೆ ಮಾರುಕಟ್ಟೆಯ ಮುಂದಿನ ನಡೆಯನ್ನು ಊಹಿಸಬಹುದಷ್ಟೇ. ಚೀನಾದಲ್ಲಿ ಕೋವಿಡ್ ನಿರ್ಬಂಧಗಳನ್ನು ಕಡಿಮೆ ಮಾಡುತ್ತಿರುವುದು ಜಾಗತಿಕ ಷೇರುಪೇಟೆಗಳನ್ನು ತುಸು ನಿರಾಳ ವಾಗಿಸಿದೆ ಎಂದು ಜಿಯೋಜಿತ್ ಪೈನಾನ್ಸಿಯಲ್ ಸರ್ವೀಸಸ್​ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.

ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,241.57 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದರು. ಏಷ್ಯಾದಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಬುಧವಾರ ಉತ್ತಮ ವಹಿವಾಟು ನಡೆದಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 33 ವೈಸೆ ವೃದ್ಧಿಯಾಗಿ 81.39ರಲ್ಲಿ ದಿನದ ವಹಿವಾಟು ಮುಗಿಸಿದೆ. ಹಿಂದಿನ ದಿನದ ವಹಿವಾಟಿನ ಮುಕ್ತಾಯದ ವೇಳೆಗೆ ರೂಪಾಯಿ ಮೌಲ್ಯ 3 ಪೈಸೆ ಕುಸಿದು 81.71 ರಲ್ಲಿ ದಿನದ ವಹಿವಾಟು ಮುಗಿಸಿತ್ತು. ಇಂದು ಉತ್ತಮ ಚೇತರಿಕೆ ದಾಖಲಿಸಿದೆ.