ಮುಂಬೈ: ಅಕ್ರಮ ಹಣ ವರ್ಗಾವಣೆ ಹಾಗೂ ಅಶ್ಲೀಲ ವಿಡಿಯೊ ಹಂಚಿಕೆಗೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಹಾಗೂ ಪತ್ನಿ ಶಿಲ್ಪಾ ಶೆಟ್ಟಿ (Shilpa Shetty) ಮನೆ ಮೇಲೆ ಇತ್ತೀಚೆಗೆ ಇಡಿ (Enforcement Directorate) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ಪರ ವಕೀಲರು ಶಿಲ್ಪಾ ಶೆಟ್ಟಿ ಹೆಸರು ಬಳಸದಂತೆ ಸೂಚಿಸಿದ್ದಾರೆ. ಈ ಪ್ರಕರಣಕ್ಕೂ ತಮ್ಮ ಕಕ್ಷಿದಾರರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿರುವ ಶಿಲ್ಪಾ ಪರ ವಕೀಲ ಪ್ರಶಾಂತ್ ಪಾಟೀಲ್, ʼʼನನ್ನ ಕಕ್ಷಿದಾರರಾದ ಶಿಲ್ಪಾ ಶೆಟ್ಟಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮಾಧ್ಯಮಗಳು ನಿರಂತರವಾಗಿ ಪ್ರಸಾರ ಮಾಡುತ್ತಿವೆ. ಅವರಿಗೆ ಈ ಪ್ರಕರಣಕ್ಕೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರ ಮೇಲೆ ಯಾವುದೇ ಜಾರಿ ನಿರ್ದೇಶನಾಲಯ ದಾಳಿ ನಡೆದಿಲ್ಲ, ಮಾಧ್ಯಮಗಳು ದಾರಿ ತಪ್ಪಿಸುತ್ತಿವೆʼʼ ಎಂದು ಹೇಳಿದ್ದಾರೆ.
ʼʼರಾಜ್ ಕುಂದ್ರಾ ಅವರಿಗೆ ಸಂಬಂಧಿಸಿದ ಕೇಸ್ ವಿಚಾರವಾಗಿ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾನು ಮಾಧ್ಯಮ ಮಿತ್ರರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಹೆಸರನ್ನು ಬಳಸಬೇಡಿ ಹಾಗೂ ಅವರ ಫೋಟೊ ಬಳಸಿ ಸುದ್ದಿ ಪ್ರಸಾರ ಮಾಡಬೇಡಿʼʼ ಎಂದು ಹೇಳಿದ್ದಾರೆ. ʼʼಒಂದು ವೇಳೆ ಯಾರಾದರೂ ಮತ್ತೆ ಅವರ ಹೆಸರನ್ನು ಬಳಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ (ನ. 29) ಬೆಳಗ್ಗೆ ರಾಜ್ ಕುಂದ್ರಾ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಅಶ್ಲೀಲ ವಿಡಿಯೊ ರೆಕಾರ್ಡಿಂಗ್ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎಂದು ಕೇಳಿ ಬಂದಿದೆ.
ಈ ಹಿಂದೆಯೂ ಒಮ್ಮೆ ರಾಜ್ ಕುಂದ್ರಾ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವರ್ಷದ ಏಪ್ರಿಲ್‌ನಲ್ಲಿ ಇಡಿ ಇಲಾಖೆ ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ ಜುಹುವಿನ ಐಷಾರಾಮಿ ಮನೆ, ಪುಣೆಯ ಮನೆ ಹಾಗೂ ಕೆಲವು ಈಕ್ವಿಟಿ ಷೇರುಗಳು ಸಹ ಇದ್ದವು. 6,600 ಕೋಟಿ ರೂ. ಮೌಲ್ಯದ ಬಿಟ್ಕಾಯ್ನ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿತ್ತು. ನಂತರ ದಂಪತಿ ಜುಹುದಲ್ಲಿರುವ ತಮ್ಮ ನಿವಾಸ ಹಾಗೂ ಪುಣೆಯ ಫಾರ್ಮ್ ಹೌಸ್ ಖಾಲಿ ಮಾಡುವಂತೆ ಇಡಿ ನೊಟೀಸ್ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಈ ಸುದ್ದಿಯನ್ನೂ ಓದಿ : Raj Kundra: ನಟಿ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಮನೆ ಮೇಲೆ ಬೆಳ್ಳಂ ಬೆಳಗ್ಗೆ ED ರೇಡ್…ಏನಿದು ಪ್ರಕರಣ?