Wednesday, 11th December 2024

ಏಕನಾಥ್ ಶಿಂಧೆಗೆ ಜುಲೈ 4ರಂದು ವಿಶ್ವಾಸಮತ ಪರೀಕ್ಷೆ

ನವದೆಹಲಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜು.4ರಂದು ಬಹುಮತ ಸಾಬೀತುಪಡಿಸಲು ಸೂಚಿಸ ಲಾಗಿದೆ. ಇದರೊಂದಿಗೆ ಶಿಂಧೆಗೆ ಬಹುಮತ ಸಾಬೀತು ಮಾಡಲು ಮೂರು ದಿನ ಮಾತ್ರ ಕಾಲಾವಕಾಶ ಇದೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದವರು ಶುಕ್ರವಾರ ಏಕನಾಥ್ ಶಿಂಧೆ ಸೇರಿದಂತೆ 16 ಭಿನ್ನಮತೀಯ ಶಾಸಕರನ್ನು ವಜಾ ಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಶಾಸಕರನ್ನು ಅನರ್ಹತೆ ನಿರ್ಧಾರವನ್ನು ಪ್ರಶ್ನಿಸಿ ಏಕನಾಥ್ ಶಿಂಧೆ ಬಣದವರೂ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸೋಮವಾರವೇ ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಳ್ಳಲಿದೆ.

ಶಿವಸೇನಾ ಪಕ್ಷದೊಳಗೆ ಬಂಡಾಯ ಎದ್ದು ಇದೀಗ ಬಿಜೆಪಿ ಜೊತೆ ಸರಕಾರ ರಚಿಸಿರುವ ಏಕನಾಥ್ ಶಿಂದೆ ಬಣದಲ್ಲಿ 50 ಶಾಸಕ ರಿದ್ದಾರೆ. ಬಿಜೆಪಿ 106 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಾದ 145 ಸ್ಥಾನಗಳು ಶಿಂಧೆ ಸರಕಾರದ ಬಳಿ ಇದೆ.

ಆದರೆ, ಸೋಮವಾರ ಸುಪ್ರೀಂ ಕೋರ್ಟ್ ಶಿವಸೇನಾ ಭಿನ್ನಮತೀಯರನ್ನು ಅನರ್ಹಗೊಳಿಸಿದರೆ ಆಗ ಹೊಸ ಸಾಧ್ಯತೆ ತೆರೆದು ಕೊಳ್ಳಬಹುದು.