Saturday, 12th October 2024

ಚೀನಿ ವಿರುದ್ಧ ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ, ಮೊಬೈಲ್‌ ಆಮದು ಮಾಡಿಕೊಳ್ಳುವುದು ಚೀನಾದಿಂದಲೇ: ಮೋಹನ್‌ ಭಾಗವತ್

ಮುಂಬೈ: ‘ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ ಮೇಲಿನ ಅವಲಂಬನೆ ಹೆಚ್ಚಿದಂತೆ, ಮಂಡಿಯೂರುವುದು ಅನಿವಾರ್ಯವಾಗಲಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್ ಭಾನುವಾರ ಎಚ್ಚರಿಸಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಮುಂಬೈ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಾವು ಇಂಟರ್‌ನೆಟ್‌ ಮತ್ತು ತಂತ್ರಜ್ಞಾನವನ್ನು ಅತಿಯಾಗಿ ಬಳಸುತ್ತಿದ್ದೇವೆ. ಆದರೆ, ನಮ್ಮಲ್ಲಿ ನಮ್ಮದೇ ಆದ ತಂತ್ರಜ್ಞಾನವನ್ನು ಹೊಂದಲಾಗಲಿಲ್ಲ. ಇದನ್ನು ಹೊರಗಿನಿಂದ ಪಡೆದಿದ್ದೇವೆ’ ಎಂದರು.

‘ಒಂದು ಸಮಾಜವಾಗಿ ನಾವು ಚೀನಾ ಮತ್ತು ಚೀನಿ ವಸ್ತುಗಳ ವಿರುದ್ಧ ಎಷ್ಟೇ ಆಕ್ರೋಶ ವ್ಯಕ್ತಪಡಿಸಬಹುದು. ಆದರೆ, ನಿಮ್ಮ ಮೊಬೈಲ್‌ನಲ್ಲಿರುವ ಅಷ್ಟೂ ಅಂಶಗಳನ್ನು ಆಮದು ಮಾಡಿಕೊಳ್ಳುವುದು ಅಲ್ಲಿಂದಲೇ ತಾನೇ ಎಂದು ಪ್ರಶ್ನಿಸಿದರು.

ಸ್ವದೇಶಿ ಎಂದರೆ ಭಾರತದ ನಿಬಂಧನೆಗಳಿಗೆ ಅನುಗುಣವಾಗಿ ಉದ್ದಿಮೆ ನಡೆಸುವುದು. ನಾವು ಸ್ವನಿರ್ಭರ ರಾಗಿರಬೇಕು. ನಮ್ಮದೇ ನಿಬಂಧನೆಗೆ ಅನುಗುಣವಾಗಿ ಅಂತರರಾಷ್ಟ್ರೀಯ ವ್ಯವಹಾರ ಇರಬೇಕು. ಹೆಚ್ಚು ಉತ್ಪಾದನೆ ಮತ್ತು ಅತ್ಯುತ್ತಮ ಗುಣಮಟ್ಟದನ್ನು ಉತ್ಪಾದಿಸುವ ಸ್ಪರ್ಧಾತ್ಮಕತೆ ಹೊಂದುವುದೇ ಆರ್ಥಿಕತೆ ಗುರಿ ಆಗಿರಬೇಕು. ನಾವು ಅಂತರರಾಷ್ಟ್ರೀಯ ವಹಿವಾಟಿನ ವಿರುದ್ಧವಾಗಿಲ್ಲ. ಆದರೆ, ನಮ್ಮ ಉತ್ಪಾದನೆ ಗ್ರಾಮೀಣ ಭಾಗದಲ್ಲಿ ಆಗಬೇಕು. ಸಾಮೂಹಿಕ ಉತ್ಪಾದನೆ ನಮ್ಮದಾಗಿರಬೇಕು. ಉತ್ಪಾದನೆ ಹೆಚ್ಚಿದಷ್ಟು ಹೆಚ್ಚಿನವರು ಸ್ವಯಂ ನಿರ್ಭರರಾಗುತ್ತಾರೆ. ಇದೇ ಸಂದರ್ಭದಲ್ಲಿ ಆದಾಯದ ಸಮಾನ ಹಂಚಿಕೆಯೂ ಅಗತ್ಯ ಎಂದರು.

ದೇಶ ಮತ್ತು ಅಭಿವೃದ್ಧಿಗೆ ಏನು ಅಗತ್ಯವೋ ಅವುಗಳನ್ನು ಉತ್ಪಾದಿಸಲು ಸರ್ಕಾರವು ನಿರ್ದೇಶನ ನೀಡಬೇಕು. ಅಲ್ಲದೆ, ಪ್ರಕೃತಿದತ್ತ ಸಂಪತ್ತಿನ ಶೋಷಣೆ ತಪ್ಪಿಸಲು ‘ಅನುಭೋಗ’ದ ಮೇಲಿನ ನಿಯಂತ್ರಣವೂ ಅಗತ್ಯ’ ಎಂದು ಭಾಗವತ್‌ ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಒಟ್ಟಾರೆ ವ್ಯಕ್ತಿಯ ಜೀವನಮಟ್ಟ ನಿರ್ಧರಿಸಲು ನಾವು ಎಷ್ಟು ಸಂಪಾದಿಸುತ್ತೇವೆ ಎಂಬುದಲ್ಲ, ಸಮಾಜಕ್ಕೆ ಮರಳಿ ಎಷ್ಟು ಕೊಡುತ್ತೇವೆ ಎಂಬುದೇ ಮಾನದಂಡ ವಾಗಬೇಕು ಎಂದು ಅಭಿಪ್ರಾಯಪಟ್ಟರು.