Thursday, 12th December 2024

Siddaramaiah : ಸಂಪುಟ ಪುನರ್‌ ರಚನೆ ಸದ್ಯಕ್ಕಿಲ್ಲ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ನವದೆಹಲಿ: ಸಂಪುಟ ಪುನರ್ ರಚನೆ ಅಥವಾ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದ್ದಾರೆ. (Siddaramaiah)

ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಮಾಧ್ಯಮದವರೇ ಹೊರತು ನಾನಲ್ಲ. ಮಾಧ್ಯಮಗಳೇ ಈ ಬಗ್ಗೆ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಸಂಭವನೀಯ ಸಚಿವರ ಪಟ್ಟಿಯನ್ನೂ ಪ್ರಕಟಿಸುತ್ತಿವೆ. ಹೀಗಾಗಿ ಸಂಪುಟ ಪುನರ್ ರಚನೆ ಮತ್ತು ವಿಸ್ತರಣೆ ಕುರಿತಾದ ಪ್ರಶ್ನೆಗಳಿಗೆ ಮಾಧ್ಯಮಗಳೇ ಉತ್ತರಿಸಬೇಕು ಎಂದು ಸಿದ್ದು ಗರಂ ಆಗಿದ್ದಾರೆ.

ಸಂಪುಟ ಪುನರ್ ರಚನೆ, ವಿಸ್ತರಣೆ ಕುರಿತಂತೆ ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಈವರೆಗೆ ಚರ್ಚೆ ಮಾಡಿಲ್ಲ. ನಾಗೇಂದ್ರ ಅವರು ಕೂಡ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಆದರೆ ಈಗಲೇ ಅಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಹಾಸನದಲ್ಲಿ ಡಿಸೆಂಬರ್ 5ರಂದು ಕಾಂಗ್ರೆಸ್ ಪಕ್ಷ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಆಯೋಜಿಸಲಾಗಿದೆ. ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನೂ ಸಂಘಟಕರು ಆಹ್ವಾನಿಸಿದ್ದಾರೆ.

ಸಮಾವೇಶ ಕುರಿತಂತೆ ಹೈಕಮಾಂಡ್‌ಗೆ ಅನಾಮಧೇಯ ಪತ್ರ ಬರೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಖರ್ಗೆ ಅವರೂ ಈ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಡಿಸಿಎಂ ಡಿಕೆಶಿ ಪ್ರತಿಕ್ರಿಯೆ

ಸಂಪುಟ ವಿಸ್ತರಣೆಯ ಸಂದರ್ಭ ಬಂದಾಗ ಆಗುತ್ತದೆ. ಈಗ ಆ ಸಂದರ್ಭ ಒದಗಿ ಬಂದಿಲ್ಲ. ಒಂದು ಸಚಿವ ಸ್ಥಾನ ಖಾಲಿ ಇದ್ದು ಅದನ್ನು ತುಂಬುವ ಬಗ್ಗೆ ಈವರೆಗೂ ಚರ್ಚೆ ನಡೆದಿಲ್ಲ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎನ್ನುವ ಸಚಿವ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಅವರ ಹೆಸರು ಮುನ್ನೆಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಾಧ್ಯಮಗಳ ಮುಂದೆ ಮಾಡುವ ಚರ್ಚೆಯಿಂದ ರಾಜಕಾರಣ ನಡೆಯುವುದಿಲ್ಲ, ಮಾಧ್ಯಮಗಳ ಮುಂದೆ ರಾಜಕೀಯ ಚರ್ಚೆ ಮಾಡುವುದು ಯಾವ ಪಕ್ಷದವರಿಗೂ ಹಾಗೂ ಯಾರಿಗೂ ಸೂಕ್ತವಾದುದಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಸಾಧನೆಯ ಸಮಾವೇಶವು ಸಿದ್ದರಾಮಯ್ಯ ಅವರ ಸಮಾವೇಶವಾಗಿ ಬದಲಾಗಿದೆ ಎನ್ನುವ ಕುರಿತು ಅಸಮಾಧಾನ ಹೊಂದಿರುವ ಪತ್ರವು ಎಐಸಿಸಿಗೆ ಬಂದಿದೆ ಎನ್ನುವ ಬಗ್ಗೆ ಸುದ್ದಿಗಾರರು ಕೇಳಿದಾಗ, ನನಗೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ, ಸಮಾವೇಶವನ್ನು ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ನನಗೆ ಈ ಮೊದಲೇ ತಿಳಿಸಿದ್ದಾರೆ. ಉಳಿದ ವಿಚಾರಗಳು ನನಗೆ ಗೊತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿಗಳು ಹಾಗೂ ನಾನು ಭೇಟಿ ಮಾಡಿ ಮೂರು ನಾಲ್ಕು ದಿನಗಳಾಗಿವೆ. ಪಕ್ಷದ ಭಾಗವಹಿಸುವಿಕೆ ಖಂಡಿತ ಇದ್ದೇ ಇರುತ್ತದೆ ಎಂದರು.

ಈ ಸುದ್ದಿಯನ್ನೂ ಓದಿ: CM Siddaramaiah: ಮೋದಿ ಅವಧಿಯಲ್ಲಿ ದೇಶದ ಸಾಲ 182 ಲಕ್ಷ ಕೋಟಿಗೆ ತಲುಪಿದೆ: ಸಿಎಂ ಸಿದ್ದರಾಮಯ್ಯ ಕಿಡಿ