Thursday, 19th December 2024

Solar Village: ಗುಜಾರಾತ್‌ನ ಮಸಾಲಿ ದೇಶದ‌ ಮೊದಲ ಸೌರ ಗ್ರಾಮ; ಏನಿದರ ವಿಶೇಷತೆ?

solar power

ಗಾಂಧಿನಗರ: ಸೌರ ವಿದ್ಯುತ್ (Solar power) ಇತ್ತೀಚಿನ ವರ್ಷದಲ್ಲಿ ಬಹಳ ಪ್ರಾಮುಖ್ಯತೆ ಪಡೆಯುತ್ತಿದೆ. ಸೋಲಾರ್ ಶಕ್ತಿ ಬಳಸಿಕೊಳ್ಳುವ ಮೂಲಕ ಪ್ರಾಕೃತಿಕ ಸಂಪನ್ಮೂಲಗಳ ಸದ್ವಿನಿಯೋಗ ಮಾಡಲು ಸರ್ಕಾರವೂ ಉತ್ತೇಜನ ನೀಡುತ್ತಿದೆ. ವಿದ್ಯುತ್ ಪೂರೈಕೆ ಮಾಡಲಾಗದಿರುವ ಸ್ಥಳಗಳಿಗೆ ಈ ಸೋಲಾರ್ ಅಳವಡಿಕೆ ದೊಡ್ಡ ವರದಾನವಾಗಲಿದೆ. ಈ ನಿಟ್ಟಿನಲ್ಲಿ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಮಸಾಲಿಯು ದೇಶದ ಮೊದಲ ಸೋಲಾರ್ ಗ್ರಾಮ (Solar Village) ಎಂಬ ಹೆಗ್ಗುರುತಿಗೆ ಪಾತ್ರವಾಗಿದೆ.

ಕೃಷಿಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ

ಪಾಕಿಸ್ತಾನದ ಗಡಿಯಿಂದ 40 ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಶೇ. 100ರಷ್ಟು ಸೌರ ವಿದ್ಯುತ್ ಉತ್ಪಾದನೆಯನ್ನು ನೀಡಲಿದ್ದು, ಇಲ್ಲಿನ ಜನತೆಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.‌ ಅತಿ ಹೆಚ್ಚಿನ ಪವರ್ ಫುಲ್‌ ಸೋಲಾರ್‌ ಪವರ್‌ ಪ್ಲಾಂಟ್‌ ಅನ್ನು ಇಲ್ಲಿ ನಿರ್ವಹಿಸಲಿದ್ದು, ಇದರಿಂದ ಅಲ್ಲಿನ ಕೃಷಿ ಕ್ಷೇತ್ರಕ್ಕೆ ಬಹಳಷ್ಟು ಪ್ರಯೋಜನವಾಗಲಿದೆ.

ಈ ಗ್ರಾಮದ ಸುಮಾರು 199 ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, 225.5 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಸುಮಾರು 1.16 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಈ ಯೋಜನೆಗೆ ಕಂದಾಯ ಇಲಾಖೆ, ಯುಜಿವಿಸಿಎಲ್, ಬ್ಯಾಂಕ್ ಮತ್ತು ಸೋಲಾರ್ ಕಂಪನಿಯಿಂದ ಬೆಂಬಲ ಕೂಡ ಸಿಕ್ಕಿದೆ.

ಈ ಹೆಗ್ಗಳಿಕೆಯ ಯೋಜನೆಯ ಬಗ್ಗೆ ಮಸಳಿ ಗ್ರಾ.ಪಂ.ನ ಸರಪಂಚ್ ಮಗನಿರಾಮ್ ರಾವಲ್ ಹಾಗೂ ಗ್ರಾಮದ ಮುಖಂಡರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿತ್ತು. ಸೌರ ಶಕ್ತಿಯಿಂದಾಗಿ ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆ ನಿವಾರಣೆಯಾಗಲಿದೆ‌ ಎಂದಿದ್ದಾರೆ. ಈ ಮೂಲಕ ಗಡಿಭಾಗದ ಗ್ರಾಮಗಳಲ್ಲಿ 24 ಗಂಟೆ ವಿದ್ಯುತ್ ಪೂರೈಕೆಯಾಗಲಿದೆ.

ಗುಜರಾತ್‌ನಲ್ಲೇ ಅತೀ ಹೆಚ್ಚು ಅಳವಡಿಕೆ!

ಸೌರ ವಿದ್ಯುತ್‌ಗೆ ಉತ್ತೇಜನ ನೀಡುವ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ (PM Surya Ghar Muft Bijli Yojana) ಈಗಾಗಲೇ ಬಹಳಷ್ಟು ಜನಸಾಮಾನ್ಯರಿಗೆ‌ ತಲುಪುತ್ತಿದೆ. ಈಗಾಗಲೇ 6,85,723ಮನೆಗಳ ಸೂರುಗಳ ಮೇಲೆ ಸೌರ ಫಲಕ ಅಳವಡಿಕೆ ಮಾಡಲಾಗಿದೆ. ಅದರಲ್ಲೂ ಗುಜರಾತ್‌ನಲ್ಲಿ ಅತಿಹೆಚ್ಚು ಸೋಲಾರ್ ಅಳವಡಿಸಲಾಗಿದೆ.

ಏನಿದು ಸೂರ್ಯ ಘರ್‌ ವಿದ್ಯುತ್ ಯೋಜನೆ?

ಸೂರ್ಯ ಘರ್‌ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಈ ಯೋಜನೆಯನ್ನು ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಜಾರಿಗೊಳಿಸಲಾಗಿದೆ. ಮನೆಗಳಲ್ಲಿ ಸೋಲಾರ್ ಸಿಸ್ಟಂ ಅಳವಡಿಸಲು ಉತ್ತೇಜನ‌ ನೀಡಲು ಸಬ್ಸಿಡಿ ಒದಗಿಸಲಾಗುತ್ತದೆ. ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಿ ಅದರಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದ್ದು, ಸರ್ಕಾರ ಸೋಲಾರ್ ಸ್ಥಾಪನೆಯ ಸುಮಾರು ಅರ್ಧದಷ್ಟು ವೆಚ್ಚವನ್ನು ಭರಿಸುತ್ತದೆ.

ಇದನ್ನು ಓದಿ: Shiva Rajkumar: ಶಿವರಾಜ್ ಕುಮಾರ್‌‌ಗೆ ಅನಾರೋಗ್ಯ, ಚಿಕಿತ್ಸೆಗೆ ಅಮೆರಿಕಕ್ಕೆ; ʼಗಾಬರಿ ಬೇಡ, 2 ತಿಂಗಳಲ್ಲಿ ಸರಿಹೋಗುತ್ತೆʼ ಎಂದ ಶಿವಣ್ಣ