Friday, 20th September 2024

ಭೀಕರ ರಸ್ತೆ ಅಪಘಾತದಲ್ಲಿ ಐವರು ಕೂಲಿ ಕಾರ್ಮಿಕರ ಸಾವು

ಸೋನಿಪತ್: ಕುಂಡ್ಲಿ ಮನೇಸರ್ ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಉತ್ತರ ಪ್ರದೇಶದಿಂದ ಜಜ್ಜರ್‌ಗೆ ಭತ್ತ ಕಟಾವು ಮಾಡಲು ಹೋಗುತ್ತಿದ್ದ ಕಾರ್ಮಿಕರನ್ನು ತುಂಬಿದ್ದ ಪಿಕಪ್‌ಗೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದು, 11 ಕಾರ್ಮಿಕ ರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಕಾರ್ಮಿಕರು ಉತ್ತರ ಪ್ರದೇಶದ ಶಹಜಾನ್‌ಪುರ ಜಿಲ್ಲೆಯ ನಿವಾಸಿಗಳು ಎಂದು ಹೇಳಲಾಗಿದೆ.

ಖಾರ್ಖೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಿಪತ್ ಕುಂಡ್ಲಿ ಮಾನೇಸರ್ ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಸೋನಿಪತ್ ಪೊಲೀಸರು ಮತ್ತು ಆರೋಗ್ಯ ಇಲಾಖೆ ತಂಡವು ಸ್ಥಳಕ್ಕೆ ದೌಡಾಯಿಸಿತ್ತು. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಬಹುದಾಗಿದೆ.

ಅಕ್ಟೋಬರ್ 7 ರಂದು ಕುಂಡ್ಲಿ ಮಾನೇಸರ್ ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ನುಹ್ ಬಳಿ ಐದು ವಾಹನಗಳು ಪರಸ್ಪರ ಡಿಕ್ಕಿ ಹೊಡೆದವು. ಇದರಲ್ಲಿ 4 ಮಂದಿ ಸಾವನ್ನಪ್ಪಿದ್ದರು.