Wednesday, 6th November 2024

ಕೊರೊನಾ ಲಸಿಕೆ ನೀಡಲು ಕೊನೆ ಹಂತದ ಸಿದ್ಧತೆ ಪೂರ್ಣ

ನವದೆಹಲಿ : ಜನವರಿ 16 ಕ್ಕೆ ದೇಶಾದ್ಯಂತ ಕೊರೊನಾ ಲಸಿಕೆ ನೀಡಲು ಕೊನೆ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಜ.16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮತ್ತು ಕೊರೊನಾ ವಾರಿಯರ್ಸ್ ಗೆ ಲಸಿಕೆ ನೀಡುವುದಕ್ಕೆ ಚಾಲನೆ ನೀಡಲಿದ್ದಾರೆ. ಜೊತೆಗೆ ಲಸಿಕೆ ಮಾಹಿತಿ ಅಪ್ ಲೋಡ್ ಮಾಡುವ ಕೋ ವಿನ್ ಆಯಪ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

ಒಟ್ಟು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ, 2934 ಕೇಂದ್ರಗಳಲ್ಲಿ ಲಸಿಕೆ ನೀಡಲು ಕೇಂದ್ರಸರ್ಕಾರ ಯೋಜಿಸಿದೆ. ಎಂದು ಸರ್ಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳ ಸಂಪೂರ್ಣ ಆರಂಭಿಕ ಖರೀದಿ ಮೊತ್ತವನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ. ಆರೋಗ್ಯ ಸೇವೆ ಕಾರ್ಯಕರ್ತರ ಅಂಕಿಅಂಶಗಳನ್ನು ನೋಡಿಕೊಂಡು ಲಸಿಕೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.