Friday, 13th December 2024

Stock Market: ಕಡಿಮೆ ದರದಲ್ಲಿ 8 ಟಾಟಾ ಸ್ಟಾಕ್ಸ್!‌ ಕುಬೇರರಾಗಲು ಸುವರ್ಣಾವಕಾಶ

Stock Market

ಬೆಂಗಳೂರು: ಕಳೆದ 3 ತಿಂಗಳಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆಯ ಟ್ರೆಂಡ್‌ನಲ್ಲಿ ಇರುವುದರಿಂದ ಟಾಟಾ ಗ್ರೂಪ್‌ (Tata Group)ಗೆ ಸೇರಿದ 8 ಪ್ರಮುಖ ಕಂಪನಿಗಳ ಷೇರುಗಳು ಈಗ ಕಡಿಮೆ ದರದಲ್ಲಿ ಸಿಗುತ್ತಿವೆ (Stock Market).

ಟಾಟಾ ಮೋಟಾರ್ಸ್‌, ಟಿಸಿಎಸ್‌, ಟೈಟನ್‌, ಟ್ರೆಂಟ್‌ ಮೊದಲಾದ ಟಾಟಾ ಕಂಪನಿಗಳ ಷೇರುಗಳ ದರದಲ್ಲಿ 23% ತನಕ ಇಳಿಕೆಯಾಗಿವೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಬ್ಲೂ ಚಿಪ್‌ ಷೇರುಗಳಲ್ಲಿ, ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ, ದೊಡ್ಡ ಕಂಪನಿಗಳ ಷೇರುಗಳಲ್ಲಿ ಸೇಫಾಗಿ ಹೂಡಿಕೆ ಮಾಡಿ ಭವಿಷ್ಯದಲ್ಲಿ ಭಾರಿ ಲಾಭ ಮಾಡಿಕೊಳ್ಳಲು ಬಯಸುವವರಿಗೆ ಈಗ ಸುವರ್ಣಾವಕಾಶ ಸೃಷ್ಟಿಯಾಗಿದೆ.

ಹೀಗಾಗಿ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಜನ ಸಾಮಾನ್ಯರೂ ಕುಬೇರರಾಗಬಹುದು. ಏಕೆಂದರೆ ಕಳೆದ 5 ವರ್ಷಗಳಿಂದೀಚೆಗೆ ಹೆಚ್ಚು ಸಂಪತ್ತನ್ನು ಸೃಷ್ಟಿಸಿರುವ ಟಾಪ್‌ 100 ಷೇರುಗಳಲ್ಲಿ ಈ ಟಾಟಾ ಷೇರುಗಳೂ ಇವೆ. ಹಾಗಾದರೆ ಈಗ ಕಡಿಮೆ ದರದಲ್ಲಿ ಸಿಗುತ್ತಿರುವ, ಟಾಟಾ ಗ್ರೂಪ್‌ನ ಈ ಎಂಟು ಷೇರುಗಳು ಯಾವುದು ಎಂಬುದನ್ನು ನೋಡೋಣ.

ಟ್ರೆಂಟ್‌
ಟಾಟಾ ಮೋಟಾರ್ಸ್‌
ಟಾಟಾ ಕನ್‌ಸ್ಯೂಮರ್‌
ಟಾಟಾ ಪವರ್‌
ಐಎಚ್‌ಸಿಎಲ್‌
ಟೈಟನ್‌
ಟಾಟಾ ಸ್ಟೀಲ್‌
ಟಿಸಿಎಸ್‌

ಈ 8 ಷೇರುಗಳು ಕಳೆದ 3 ತಿಂಗಳಿನ ಅವಧಿಯಲ್ಲಿ ದರ ಇಳಿಕೆಯನ್ನು ದಾಖಲಿಸಿವೆ. ಈಗ ಎಷ್ಟು ಅಗ್ಗವಾಗಿದೆ ಎಂಬುದನ್ನು ನೋಡೋಣ.

ಟಾಟಾ ಮೋಟಾರ್ಸ್‌ ಷೇರಿನ ದರದಲ್ಲಿ ಕಳೆದ ಮೂರು ತಿಂಗಳಿನಲ್ಲಿ 23% ಇಳಿಕೆಯಾಗಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ 347% ಲಾಭವನ್ನು ಟಾಟಾ ಮೋಟಾರ್ಸ್‌ ಷೇರು ಕೊಟ್ಟಿದೆ. 2019ರಲ್ಲಿ ಟಾಟಾ ಮೋಟಾರ್ಸ್‌ನ ಪ್ರತಿ ಷೇರಿನ ದರ 176 ರೂ.ನಷ್ಟಿತ್ತು. ಈಗ 790 ರೂ.ಗೆ ಏರಿಕೆಯಾಗಿದೆ. ಆದ್ದರಿಂದ ದೀರ್ಘಾವಧಿಯ ಹೂಡಿಕೆಗೆ ಇದು ಉತ್ತಮ ಬ್ಲೂ ಚಿಪ್‌ ಷೇರಾಗಿದೆ.

ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಸ್ಟ್‌ ಷೇರು ಕಳೆದ ಮೂರು ತಿಂಗಳಿನಲ್ಲಿ 22% ಅಗ್ಗವಾಗಿದೆ. ಈ ಷೇರು ಕಳೆದ ಐದು ವರ್ಷದಲ್ಲಿ ಹೂಡಿಕೆದಾರರಿಗೆ ಗಣನೀಯ ಲಾಭ ನೀಡಿದೆ. 2019ರ ಡಿಸೆಂಬರ್‌ನಲ್ಲಿ ಈ ಷೇರಿನ ದರ 328 ರೂ. ಇತ್ತು. ಈಗ 929 ರೂ.ಗೆ ಏರಿಕೆಯಾಗಿದೆ. ಅಂದರೆ 183% ಹೆಚ್ಚಳವಾಗಿದೆ.

ಐಎಚ್‌ಸಿಎಲ್‌ ಅಥವಾ ಇಂಡಿಯನ್‌ ಹೋಟೆಲ್ಸ್‌ ಕಂಪನಿಯು ಹೋಟೆಲ್ಸ್‌ ಮತ್ತು ರೆಸಾರ್ಟ್‌ಗಳನ್ನು ನಡೆಸುತ್ತಿದ್ದು, ಟಾಟಾ ಗ್ರೂಪ್‌ನಲ್ಲಿ ಶತಮಾನದ ಇತಿಹಾಸ ಹೊಂದಿರುವ ಹಳೆಯ ಕಂಪನಿಯಾಗಿದೆ. ತಾಜ್‌ ಹೋಟೆಲ್ಸ್‌, ವಿವಂತಾ, ಜಿಂಜರ್‌ ಹೋಟೆಲ್ಸ್‌ ಇದರ ಅಧೀನದಲ್ಲಿವೆ. ಈ ಐಎಚ್‌ಸಿಎಲ್‌ ಷೇರಿನ ದರ ಕಳೆದ ಮೂರು ತಿಂಗಳಿನಲ್ಲಿ 20% ಕಡಿಮೆಯಾಗಿದೆ. ಕಳೆದ ಐದು ವರ್ಷಗಳಲ್ಲಿ IHCL ಷೇರು ಹೂಡಿಕೆದಾರರಿಗೆ 501% ಲಾಭ ಕೊಟ್ಟಿದೆ. IHCL ಷೇರಿನ ದರ 2019ರಲ್ಲಿ 142 ರೂ.ನಷ್ಟಿತ್ತು. ಈಗ 850 ರೂ.ಗೆ ಏರಿಕೆಯಾಗಿದೆ. ಅಂದರೆ ಹೂಡಿಕೆದಾರರಿಗೆ 500% ಲಾಭ ಕೊಟ್ಟಿದೆ.

ಜ್ಯುವೆಲ್ಲರಿ, ವಾಚು, ಕನ್ನಡಕಗಳ ಉತ್ಪಾದಕ ಟೈಟನ್‌ ಕಂಪನಿಯು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕಾರ್ಪೊರೇಟ್‌ ಪ್ರಧಾನ ಕಚೇರಿಯನ್ನು ಹೊಂದಿದೆ. ಖ್ಯಾತ ಜ್ಯುವೆಲ್ಲರಿ ಬ್ರಾಂಡ್‌ ತನಿಷ್ಕ್‌ ಅನ್ನು ಟೈಟನ್‌ ನಡೆಸುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ ಟೈಟನ್‌ ಷೇರಿನ ದರದಲ್ಲಿ 7% ಇಳಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಟೈಟನ್‌ ಷೇರು, ಹೂಡಿಕೆದಾರರಿಗೆ 196% ಲಾಭವನ್ನು ಕೊಟ್ಟಿದೆ. 2019ರಲ್ಲಿ ಟೈಟನ್‌ ಷೇರಿನ ದರ 1,186 ರೂ. ಇತ್ತು. ಈಗ 3,500 ರೂ.ಗೆ ಏರಿಕೆಯಾಗಿದೆ.

ಕಳೆದ ಮೂರು ತಿಂಗಳಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಮತ್ತು ಟಾಟಾ ಪವರ್ ಷೇರಿನ ದರದಲ್ಲಿ‌ ತಲಾ 2% ಇಳಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ಟಿಸಿಎಸ್‌ 116% ಲಾಭ ನೀಡಿದೆ. ಟಿಸಿಎಸ್‌ ಷೇರಿನ ದರ ಐದು ವರ್ಷಗಳಲ್ಲಿ 2000 ರೂ.ಗಳಿಂದ 4,400 ರೂ.ಗೆ ಏರಿಕೆಯಾಗಿದೆ. ಟಾಟಾ ಪವರ್‌ ಷೇರು 2019ರಲ್ಲಿ 55 ರೂ.ಗೆ ಸಿಗುತ್ತಿತ್ತು. ಈಗ 428 ರೂ.ಗೆ ಏರಿಕೆಯಾಗಿದೆ. 690% ಹೆಚ್ಚಳವಾಗಿದೆ.

ಟಾಟಾ ಸ್ಟೀಲ್‌ ಷೇರಿನ ದರದಲ್ಲಿ ಕಳೆದ ಮೂರು ತಿಂಗಳಿನಲ್ಲಿ ಇಳಿಕೆ ಆಗಿರದಿದ್ದರೂ, ಕೇವಲ 1% ಮಾತ್ರ ಏರಿಕೆಯಾಗಿದೆ. ಟಾಟಾ ಸ್ಟೀಲ್‌ ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ 247% ಲಾಭ ನೀಡಿದೆ. 2019ರಲ್ಲಿ ಟಾಟಾ ಸ್ಟೀಲ್‌ ಷೇರಿನ ದರ 42 ರೂ. ಇತ್ತು. ಈಗ 148 ರೂ.ಗೆ ಏರಿಕೆಯಾಗಿದೆ. ಅಂದರೆ ಹೂಡಿಕೆದಾರರಿಗೆ 247% ಲಾಭ ಕೊಟ್ಟಿದೆ.

ನೀವು ಜುಡಿಯೊ ಎಂಬ ಅಪಾರೆಲ್‌ ಬ್ರಾಂಡ್‌ನ ಮಳಿಗೆಗಳನ್ನು ನೋಡಿರಬಹುದು. ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಟ್ರೆಂಡಿ ಡ್ರೆಸ್‌ಗಳನ್ನು ಮಾರಾಟ ಮಾಡುತ್ತಿದ್ದು, ಫ್ಯಾಷನ್‌ ಮಾರ್ಕೆಟ್‌ನಲ್ಲಿ ಸಂಚಲನ ಮೂಡಿಸಿದೆ. ಈ ಜುಡಿಯೊ ಬ್ರಾಂಡ್‌, ಟಾಟಾ ಸಮೂಹದ ಟ್ರೆಂಟ್‌ ಕಂಪನಿಯದ್ದಾಗಿದೆ. ಕಳೆದ ಮೂರು ತಿಂಗಳಿನಲ್ಲಿ ಟ್ರೆಂಟ್‌ ಷೇರಿನ ದರದಲ್ಲಿ 1% ಇಳಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ಟ್ರೆಂಟ್‌ ಷೇರಿನಲ್ಲಿ ಭರ್ಜರಿ ಲಾಭವಾಗಿದೆ. 2019ರಲ್ಲಿ ಟ್ರೆಂಟ್‌ ಷೇರಿನ ದರ 500 ರೂ. ಇತ್ತು. ಈಗ 6,990 ರೂ.ಗೆ ಏರಿಕೆಯಾಗಿದೆ. ಅಂದರೆ ಹೂಡಿಕೆದಾರರಿಗೆ 1,284% ಲಾಭ ನೀಡಿದೆ.

ಹಾಗಾರೆ ಈಗ ಹೂಡಿಕೆದಾರರು ಏನು ಮಾಡಬಹುದು?

ಟಾಟಾ ಸ್ಟಾಕ್ಸ್‌ಗಳು ಈಗ ಡಿಸ್ಕೌಂಟ್‌ ದರದಲ್ಲಿ ಸಿಗುತ್ತಿವೆ ಎಂಬ ಆಕರ್ಷಕ ಅಂಶವನ್ನು ಹೊರತುಪಡಿಸಿದರೂ, ಇವುಗಳನ್ನು ಖರೀದಿಸಲು ಹಲವು ಕಾರಣಗಳೂ ಇವೆ. ಮೋತಿಲಾಲ್‌ ಓಸ್ವಾಲ್‌ ಸಂಸ್ಥೆಯ ವರದಿಯ ಪ್ರಕಾರ 2014ರಿಂದ 2019ರ ಅವಧಿಯಲ್ಲಿ ಈ ಷೇರುಗಳು ಹೆಚ್ಚು ಸಂಪತ್ತು ಸೃಷ್ಟಿಸಿದ ಟಾಪ್‌ 100 ಷೇರುಗಳ ಲಿಸ್ಟ್‌ನಲ್ಲಿವೆ.

ಲಾರ್ಜ್‌ ಕ್ಯಾಪ್‌ ಷೇರುಗಳು ಹೂಡಿಕೆಗೆ ಸುರಕ್ಷಿತವಾಗಿರುತ್ತವೆ. ಈ ಷೇರುಗಳು ಕಡಿಮೆ ದರದಲ್ಲಿ ಸಿಗುವಾಗ ಖರೀದಿಸಿದರೆ, ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಏರುಗತಿಯಲ್ಲಿದ್ದಾಗ ಇಂಥ ಷೇರುಗಳು ಬೇಗ ದರವನ್ನು ಹೆಚ್ಚಿಸಿಕೊಳ್ಳುತ್ತವೆ.

ಈ ಸುದ್ದಿಯನ್ನೂ ಓದಿ: JM Financial Picks Top Stocks: 2025ರಲ್ಲಿ ಲಾಭ ಗಳಿಸಲು‌ 12 ಬೆಸ್ಟ್‌ ಸ್ಟಾಕ್ಸ್!