Saturday, 14th December 2024

ಮೂರು ಕೃಷಿ ಕಾನೂನುಗಳಿಗೆ ಸುಪ್ರೀಂ ’ಬ್ರೇಕ್’: ವಿವಾದ ಬಗೆಹರಿಸಲು ಸಮಿತಿ ರಚನೆ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಮೂರು ಕೃಷಿ ಕಾನೂನುಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ವಿವಾದ ಸೌಹಾರ್ದಯುತವಾಗಿ ಬಗೆಹರಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ.

ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ವಿ.ರಾಮ ಸುಬ್ರಮಣಿಯಣ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ರೈತರ ಪ್ರತಿಭಟನೆ ಮತ್ತು ಕೃಷಿ ಕಾನೂನುಗಳ ಕುರಿತಂತೆ ಸಲ್ಲಿಸ ಲಾಗಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿತ್ತು.

ನ್ಯಾಯಮೂರ್ತಿಗಳು ಕಾನೂನುಗಳಿಗೆ ತಡೆ ನೀಡಿದ್ದಾರೆ. ಈ ಮೂಲಕ ಕಳೆದ 45 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳು ಅಂತ್ಯಗೊಳ್ಳುವ ಸೂಚನೆಗಳು ಕಂಡು ಬಂದಿವೆ. ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು ಸಂಧಾನ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈವರೆಗೂ ರೈತರ ಜೊತೆ ಮಾತುಕತೆ ನಡೆಸಿಲ್ಲ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೋಬ್ಡೆ ಅವರು, ಪ್ರಧಾನಿ ಅವರು ರೈತರೊಂದಿಗೆ ಮಾತು ಕತೆ ನಡೆಸಬೇಕು ಎಂದು ಸೂಚಿಸುವ ಅಧಿಕಾರ ನಮಗೆ ಇಲ್ಲ. ಹೊಸ ಕಾನೂನುಗಳಿಗೆ ತಡೆ ನೀಡುವುದರಿಂದಲೂ ಸಮಸ್ಯೆ ಬಗೆಹರಿಯುವುದಿಲ್ಲ. ಆದರೆ ಉನ್ನತ ಮಟ್ಟದ ಸಮಿತಿ ರಚನೆ ಮಾಡುತ್ತೇವೆ. ಸಮಿತಿ ಚರ್ಚೆ ಮಾಡಿ, ಸಮಗ್ರ ಅಧ್ಯಯನ ಮಾಡಿ ವರದಿ ನೀಡಲಿದೆ. ನಂತರ ವಿವಾದ ಬಗೆಹರಿಸಲು ಪ್ರಯ ತ್ನಿಸೋಣ. ಪ್ರತಿಭಟನೆಯಲ್ಲಿ ಇರುವವರೆಲ್ಲಾ ರೈತರು. ವಕೀಲರ ಮೂಲಕ ಸಮಿತಿಯ ಮುಂದೆ ಹೋಗಿ ನಿಮ್ಮ ವಾದ ಮಂಡನೆ ಮಾಡಿ ಎಂದು ಸಲಹೆ ನೀಡಿದರು.

ಸಮಿತಿಗೆ ನಿವೃತ್ತ ನ್ಯಾಯಮೂರ್ತಿಗಳಾದ ಜೆ.ಎಸ್.ಖೇಹರ್, ಜಿ.ಎಸ್.ಸಿಂಘ್ವಿ, ಅಗರ್‍ವಾಲ್ ಹಾಗೂ ಮತ್ತಿತರರನ್ನು ಪರಿಗಣಿಸ ಬಹುದು ಎಂದು ವಕೀಲ ಶರ್ಮಾ ಸಲಹೆ ನೀಡಿದ್ದಾರೆ. ಸಾಲಿಸಿಟರ್ ಜನರಲ್ ಮೆಹ್ತಾ, ಅಡ್ವೋಕೆಟ್ ಜನರಲ್ ಕೆ.ಕೆ.ವೇಣು ಗೋಪಾಲ ಮತ್ತಿತರರು ಸರ್ಕಾರದ ಪರವಾಗಿ ವಾದ ಮಂಡಿಸಿದರು.