Wednesday, 11th December 2024

ವಾಯು ಗುಣಮಟ್ಟ ಹದಗೆಟ್ಟಿದ್ದರೂ ಶಾಲೆ ಓಪನ್‌: ಸುಪ್ರೀಂ ಸಿಡಿಮಿಡಿ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಉಲ್ಬಣವಾಗಿರುವಂತೆಯೇ ಶಾಲೆ ಗಳನ್ನು ತೆರೆಯುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸರ್ಕಾರವು ವಯಸ್ಕರಿಗೆ ವರ್ಕ್ ಫ್ರಂ ಹೋಮ್ ಜಾರಿ ಮಾಡಿರುವ ಈ ಹೊತ್ತಿನಲ್ಲಿ ಮಕ್ಕಳನ್ನು ಶಾಲೆಗೆ ಹೋಗಲು ಏಕೆ ಒತ್ತಾಯಿಸಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದೆ. ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದ್ದರೂ ಏನೂ ಆಗುತ್ತಿಲ್ಲ ಎಂದು ನಮಗೆ ಅನಿಸುತ್ತಿದೆ. ರಾಜಧಾನಿಯ ವಾಯು ಗುಣಮಟ್ಟವು ತೀವ್ರ ಹದಗೆಟ್ಟಿತ್ತು ಎಂದು ಹೇಳಿದೆ.

ಭೂ ವಿಜ್ಞಾನ ಸಚಿವಾಲಯದ ಪ್ರಕಾರ, ಗುರುವಾರ ದೆಹಲಿ ವಾಯು ಗುಣಮಟ್ಟವು ತೀವ್ರ ಹದಗೆಟ್ಟಿತ್ತು. AQI 8 ಗಂಟೆಗೆ 419 ರಷ್ಟಿತ್ತು. ಕನಿಷ್ಠ ತಾಪಮಾನವು ಋತುವಿನ ಸರಾಸರಿಗಿಂತ ನಾಲ್ಕು ಪಟ್ಟು ಕಡಿಮೆ ಅಂದರೆ 13.4 ಡಿಗ್ರಿ ಸೆಲ್ಸಿಯಸ್‌ ನಷ್ಟಿದೆ. ಉತ್ತಮ ಗಾಳಿಯ ವೇಗದಿಂದಾಗಿ ಗಾಳಿಯ ಗುಣಮಟ್ಟ ಶುಕ್ರವಾರದಿಂದ ಸುಧಾರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.