Friday, 13th December 2024

ಕೃಷಿ ಸುಧಾರಣಾ ಕಾಯ್ದೆಗೆ ತಡೆ ನೀಡಿ: ಕೇಂದ್ರಕ್ಕೆ ಸುಪ್ರೀಂ ಗುದ್ದು

ನವದೆಹಲಿ: ದೇಶಾದ್ಯಂತ ರೈತರ ಹೋರಾಟಕ್ಕೆ ಕಾರಣವಾಗಿರುವ ಕೃಷಿ ಸುಧಾರಣಾ ಕಾಯ್ದೆ ತಡೆ ನೀಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ.

ಕೇಂದ್ರ ಸರ್ಕಾರದ ಸಮಿತಿ ರೈತರ ನಡುವೆ ಸ್ಪಷ್ಟ ಒಪ್ಪಂದ ಬರುವವರೆಗೂ ತಡೆ ನೀಡಬೇಕೆಂದು ತಿಳಿಸಲಾಗಿದೆ. ರೈತರ ಪ್ರತಿ ಭಟನೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರನ್ನೊಳಗೊಂಡ ನ್ಯಾಯಾಪೀಠವು ಈ ಸೂಚನೆ ನೀಡಿದೆ.

ಕಾಯ್ದೆಗಳಿಂದಾಗಿ ದೇಶದಲ್ಲಾದ ಬೆಳವಣಿಗೆಗಳ ಕುರಿತು ನ್ಯಾಯಾಲಯ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದೆ. ಸರ್ಕಾರ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧವಿದೆ ಎಂದು ತಿಳಿಸಿದೆ. ಆದರೆ ರೈತರು ಕಾಯ್ದೆಗಳನ್ನು ಕೈ ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಹಲವಾರು ಸುತ್ತಿನ ಸಭೆಗಳು ವಿಫಲವಾಗಿದೆ ಎನ್ನುವುದನ್ನು ನಾವು ವರದಿಯಿಂದ ತಿಳಿದು ಕೊಂಡಿದ್ದೇವೆ. ಹಾಗಾಗಿ, ಕೇಂದ್ರದ ಸಮಿತಿ ಅಂತಿಮ ನಿರ್ಧಾರಕ್ಕೆ ಬರುವವರೆಗೂ ಕಾಯ್ದೆ ಜಾರಿಗೆ ತಡೆ ನೀಡಬೇಕಿದೆ ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿಯಿದ್ದರೆ ಮೊದಲು ಕಾಯ್ದೆಯ ಅನುಷ್ಠಾನಕ್ಕೆ ತಡೆ ನೀಡಬೇಕು. ಇಲ್ಲವಾದರೆ ನಾವು ಆ ಕೆಲಸ ಮಾಡಲು ಸಿದ್ಧವಿದ್ದೇವೆ. ಅವರು ತಡೆ ನೀಡದಿದ್ದರೆ, ನಾವು ಈ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿ ರೂಪಿಸುತ್ತೇವೆಂದು ಎಂದು ನ್ಯಾಯಾಲಯ ತಿಳಿಸಿದೆ.