ನವದೆಹಲಿ: ವಾಹನ ಸಂಚಾರಕ್ಕೆ ಉದ್ದೇಶಿಸಿರುವ ಹೆದ್ದಾರಿಗಳಲ್ಲಿ ಪಾದಚಾರಿಗಳು ನಡೆದಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೆದ್ದಾರಿಗಳಲ್ಲಿ ಪಾದಚಾರಿಗಳ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ನಿರಾಕರಿಸಿದ ಕೋರ್ಟ್, ಮೇಲಿನಂತೆ ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮೊದಲು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಗುಜರಾತ್ ಹೈಕೋರ್ಟ್ನ ಆದೇಶ ವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ.ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು.
ಹೌದು, ಪಾದಚಾರಿಗಳು ಹೈವೇಗಳಲ್ಲಿ ಹೇಗೆ ಬರುತ್ತಾರೆ? ಅವರಲ್ಲಿ ಶಿಸ್ತು ಇರಬೇಕು. ಅವರು ಹೆದ್ದಾರಿಗಳಲ್ಲಿ ಸಂಚರಿಸಕೂಡದು. ಜಗತ್ತಿನಲ್ಲೆಲ್ಲೂ ಈ ರೀತಿ ಹೆದ್ದಾರಿಗಳಲ್ಲಿ ನಡೆಯುವವರು ಸಿಗುವುದಿಲ್ಲ. ಭವಿಷ್ಯದಲ್ಲಿ ಪಾದಚಾರಿಗಳು ಹೆದ್ದಾರಿಗಳಲ್ಲೇ ವಾಹನಗಳನ್ನು ನಿಲ್ಲಿಸಬೇಕೆಂದು ಅರ್ಜಿ ಹಾಕು ತ್ತಾರೆ. ಅದೆಲ್ಲ ಹೇಗೆ ಸಾಧ್ಯ ಎಂದು ಪೀಠ ಅರ್ಜಿದಾರರನ್ನೇ ಪ್ರಶ್ನಿಸಿತು. ಜನರು ನಿಯಮಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯವು ಅವರನ್ನು ಹೇಗೆ ರಕ್ಷಿಸಬೇಕು ಎಂದು ಖಡಕ್ ಆಗಿಯೇ ಕೇಳಿತು.
ಹೆದ್ದಾರಿಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಹೆಚ್ಚು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರೆ, ಪಾದಚಾರಿಗಳು ಇಲ್ಲದಿದ್ದರೆ ಇಂತಹ ಘಟನೆಗಳು ಸಂಭವಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ದೇಶದಲ್ಲಿ ಹೆದ್ದಾರಿಗಳು ಹೆಚ್ಚಿವೆ. ಆದರೆ, ನಮ್ಮಲ್ಲಿ ಶಿಸ್ತು ಬೆಳೆದಿಲ್ಲ. ಇದು ಸಂಪೂರ್ಣ ಅಸಂಬದ್ಧ ಅರ್ಜಿ. ಇಂಥವರಿಗೆ ಖಂಡಿತಾ ದಂಡ ವಿಧಿಸಬೇಕು ಎಂದು ಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿತು.