Friday, 13th December 2024

ಅಸಭ್ಯ ವರ್ತನೆ: ಕ್ಷಮೆಯಾಚಿಸಿದ ಸುರೇಶ್ ಗೋಪಿ

ಕೋಝಿಕ್ಕೋಡ್: ಕೋಝಿಕ್ಕೋಡ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಬಿಜೆಪಿ (BJP) ಮುಖಂಡ ಹಾಗೂ ನಟ ಸುರೇಶ್ ಗೋಪಿ ವಿರುದ್ಧ ಮಹಿಳಾ ಪತ್ರಕರ್ತೆ ಕಾನೂನು ಕ್ರಮ ಜರುಗಿಸಲು ಮುಂದಾದ ಬಳಿಕ ಗೋಪಿ ಕ್ಷಮೆಯಾಚಿಸಿದ್ದಾರೆ.

ಸುರೇಶ್ ಗೋಪಿ ತಮ್ಮ ಫೇಸ್ ಬುಕ್ ಖಾತೆ ಮೂಲಕ ಕ್ಷಮೆಯಾಚಿಸಿದ್ದಾರೆ. ಪತ್ರಕರ್ತರನ್ನು ಪ್ರೀತಿಯಿಂದ ನಡೆಸಿಕೊಂಡಿದ್ದು, ಮಗುವಿಗೆ ಯಾವುದೇ ರೀತಿಯ ನೋವಾಗಿದ್ದರೆ ಅಥವಾ ಮಾನಸಿಕ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸುರೇಶ್ ಗೋಪಿ ತಮ್ಮ ಅಧಿಕೃತ ಫೇಸ್ ಬುಕ್ ​​ನಲ್ಲಿ ಬರೆದುಕೊಂಡಿದ್ದಾರೆ.

ನಿನ್ನೆ ಸಂಜೆ (ಅಕ್ಟೋಬರ್ 27/23) ಕೋಝಿಕ್ಕೋಡ್​ನಲ್ಲಿ ಮಾಧ್ಯಮಗೋಷ್ಠಿ ಇತ್ತು. ಆ ವೇಳೆ, ಸುರೇಶ್ ಗೋಪಿ ಅವರು ಮಹಿಳಾ ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಶ್ನೆ ಕೇಳಿದ ಪತ್ರಕರ್ತೆಯ ಭುಜದ ಮೇಲೆ ಸುರೇಶ್ ಗೋಪಿ ಕೈ ಹಾಕಿದ್ದಾರೆ. ಪತ್ರಕರ್ತೆ ದೂರ ಸರಿದರೂ ಕೂಡ ಸುರೇಶ್ ಗೋಪಿ ತಮ್ಮ ಈ ವರ್ತನೆಯನ್ನು ಮುಂದುವರಿಸಿದ್ದಾರೆ.

ವಿಡಿಯೋದಲ್ಲಿ ಈ ವರ್ತನೆ ಸ್ಪಷ್ಟವಾಗಿ ಕಂಡಿದೆ. ಪತ್ರಕರ್ತೆ ಈ ಸಂಬಂಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಮಾಧ್ಯಮ ಸಂಸ್ಥೆ ಕೂಡ ಕಾನೂನು ಕ್ರಮ ಸೇರಿದಂತೆ ಮುಂದಿನ ಎಲ್ಲಾ ಹೆಜ್ಜೆಗಳಿಗೆ ತಮ್ಮ ಬೆಂಬಲ ನೀಡುವುದಾಗಿ ತಿಳಿಸಿದೆ. ಅಲ್ಲದೆ, ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಶುಕ್ರವಾರ ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟ, ರಾಜಕಾರಣಿ ಸುರೇಶ್ ಗೋಪಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ.

ಕೆಯುಡಬ್ಲ್ಯುಜೆ ಹೇಳಿಕೆಯಲ್ಲಿ, ಬಿಜೆಪಿ ನಾಯಕನ ಈ ವರ್ತನೆ ‘ಮಹಿಳಾ ಉದ್ಯೋಗಿಗಳಿಗೆ ಮಾಡಿದ ಅವಮಾನ’ ಎಂದು ಹೇಳಿದೆ.