Wednesday, 11th December 2024

ಸ್ವಚ್ಛತಾ ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಸ್ಪಂದನೆ

ನವದೆಹಲಿ: ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಮನವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳು, ರಾಜಕಾರಣಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಒಂದು ಗಂಟೆಗಳ ಕಾಲ ಶ್ರಮದಾನ ದಲ್ಲಿ ಭಾಗವಹಿಸಿದರು.

“ಮನ್ ಕಿ ಬಾತ್” 105 ನೇ ಸಂಚಿಕೆಯಲ್ಲಿ ಪಿಎಂ ಮೋದಿಯವರು ಅಕ್ಟೋಬರ್ 1 ರಂದು ಎಲ್ಲಾ ನಾಗರಿಕರು “ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ” ಮಾಡಿ ಎಂದು ಮನವಿ ಮಾಡಿದ್ದರು. ಇದು ಮಹಾತ್ಮ ಗಾಂಧಿಯವರ ಜನ್ಮದಿನದ ಮುನ್ನಾದಿನ ನಡೆಯುವ “ಸ್ವಚ್ಛಾಂಜಲಿ” ಎಂದು ಹೇಳಿದ್ದರು. ಜೊತೆಗೆ, ಈ ಅಭಿಯಾನವನ್ನು ‘ಏಕ್ ತಾರೀಖ್, ಏಕ್ ಗಂಟಾ, ಏಕ್ ಸಾಥ್’ ಎಂದು ಕರೆದಿದ್ದರು.

ದೇಶಾದ್ಯಂತ ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಪೊರಕೆ ಹಿಡಿದು ‘ಸ್ವಚ್ಛತಾ ಹಿ ಸೇವಾ’ ಅಭಿಯಾನದಲ್ಲಿ ಭಾಗಿಯಾ ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೊರಕೆ ಹಿಡಿದು ಅಹಮದಾಬಾದ್‌ನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕೂಡ ದೆಹಲಿಯ ಝಾಂಡೇವಾಲನ್ ಪ್ರದೇಶದಲ್ಲಿ ನಡೆದ ಅಭಿಯಾನದಲ್ಲಿ ಭಾಗವಹಿಸಿದ್ದರು.

ಕೇಂದ್ರ ವಿದ್ಯುತ್ ಸಚಿವ ಆರ್‌ಕೆ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, “ನಾವು (ಕೇಂದ್ರ) ದೇಶವನ್ನು ಸ್ವಚ್ಛ ಮಾಡಲು ಸಂಕಲ್ಪ ಮಾಡಿದ್ದೇವೆ. ಇದು ದೊಡ್ಡ ಸವಾಲಾಗಿದ್ದು, ನಾವು ಅದನ್ನು ಮಾಡೇ ಮಾಡುತ್ತೇವೆ” ಎಂದು ಭರವಸೆ ವ್ಯಕ್ತಪಡಿಸಿ ದರು.

ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ನವದೆಹಲಿಯಲ್ಲಿ ನಡೆದ ಸ್ವಚ್ಛತಾ ಚಟುವಟಿಕೆಯಲ್ಲಿ ಸ್ವಯಂಸೇವಕರಾಗಿ ಪಾಲ್ಗೊಂಡರು. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ರಾಷ್ಟ್ರ ರಾಜಧಾನಿಯಾದ್ಯಂತ 500 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರು ಸಹ “ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್”ಗೆ ಎಲ್ಲರೂ ಬೆಂಬಲ ನೀಡಿ ಸ್ವಚ್ಛತೆಯ ಕಡೆಗೆ ಸಾಗುವ ಸಂಕಲ್ಪ ಮಾಡೋಣವೆಂದು ಜನರಿಗೆ ಮನವಿ ಮಾಡಿದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೀಡಿದ ಮಾಹಿತಿ ಪ್ರಕಾರ, ಸ್ವಚ್ಛತಾ ಅಭಿಯಾನದಲ್ಲಿ ಎನ್‌ಜಿಒ ಗಳು, ಮಾರುಕಟ್ಟೆ ಸಂಘಗಳು, ಸ್ವ-ಸಹಾಯ ಗುಂಪುಗಳು, ವ್ಯಾಪಾರ ಸಂಸ್ಥೆಗಳು ಮತ್ತು ಖಾಸಗಿ ವಲಯದ ಕಂಪನಿಗಳು ಭಾಗಿ ಯಾಗಿದ್ದವು.

ಒಟ್ಟು 22,000 ಕ್ಕೂ ಹೆಚ್ಚು ಮಾರುಕಟ್ಟೆ ಪ್ರದೇಶಗಳು, 10,000 ಜಲಮೂಲಗಳು, 7,000 ಬಸ್‌ ನಿಲ್ದಾಣಗಳು/ಟೋಲ್ ಪ್ಲಾಜಾಗಳು, 1,000 ಗೋಶಾಲೆಗಳು, 300 ಮೃಗಾಲಯಗಳು ಮತ್ತು ವನ್ಯಜೀವಿ ಪ್ರದೇಶಗಳು ಸೇರಿದಂತೆ ಗ್ರಾಮೀಣ ಮತ್ತು ನಗರದ ವಿವಿಧ ಸ್ಥಳಗಳಲ್ಲಿ ಶ್ರಮದಾನ ಮಾಡಲಾಗಿದೆ.